ಕೊಲ್ಕತ್ತಾ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೈದ್ಯಾಧಿಕಾರಿ ಶನಿವಾರ ರಾತ್ರಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ದಾಸಗುಪ್ತ, ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ. ವೈದ್ಯಾಧಿಕಾರಿ ಮರಣದ ನಂತರ ಕೊಲ್ಕತ್ತಾ ವೈದ್ಯರ ಸಂಘ ಸಂತಾಪ ಸೂಚಿಸಿದೆ.
ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡ ರಾಜ್ಯದ ಮೊದಲ ವೈದ್ಯಕೀಯ ಅಧಿಕಾರಿ ದಾಸಗುಪ್ತ ಎನಿಸಿಕೊಂಡಿದ್ದಾರೆ. ಅಂದ್ಹಾಗೆ, ದಾಸಗುಪ್ತ ಅವರ ಪತ್ನಿಯೂ ಕೊರೊನಾ ಪಾಸಿಟಿವ್ ರೋಗಿಯಾಗಿದ್ದು, ಅವರು ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ವೈದ್ಯರು.
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಪೈಕಿ ಹಲವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ. ಅದರಲ್ಲಿ ಕೆಲವರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರ ಕೊರತೆಯೂ ಉಂಟಾಗುವ ಆತಂಕ ಇದೆ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈವರೆಗೂ 611 ಸೋಂಕಿತರನ್ನು ಹೊಂದಿದೆ. ಅದರಲ್ಲಿ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. 105 ಸೋಂಕಿತರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಕೊಲ್ಕತ್ತಾ ನಗರದಲ್ಲಿ 184 ಕೇಸ್ ದಾಖಲಾಗಿದೆ.