ಕಾಸರಗೋಡು: ಅನೇಕ ವಿಚಾರಗಳಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ ಹಬ್ಬಗಳ ಆಚರಣೆ ಸಂಬಂಧ ವ್ಯಾಪಾರ ಸಂಸ್ಥೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ. ಬಳಸಿದ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಎಸೆಯುವ ಕ್ರಮ ಕಂಡುಬರುತ್ತಿದ್ದು, ಇದು ಸೋಂಕು ಹೆಚ್ಚಳ ಭೀತಿ ಮೂಡಿಸುತ್ತಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯುವಿಕೆ ಸಹಿತ ರಾಜ್ಯ ಸರ್ಕಾರ-ಆರೋಗ್ಯ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸುವ ಮೂಲಕ ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ವಾಹನಗಳನ್ನು ಬಳಸುವ ವೇಳೆ ಸ್ಪರ್ಶಿಸಬೇಕಾಗಿ ಬರುವ ಭಾಗಗಳನ್ನು ಸ್ಯಾನಿಟೈಸರ್ ಬಳಸಿ ಶುದ್ಧಗೊಳಿಸಬೇಕು. ವಾಹನದಲ್ಲಿ ಸಂಚರಿಸುವ ವ್ಯಕ್ತಿ ವ್ಯಕ್ತಿಗತ ಶುಚಿತ್ವ ಕಾಯ್ದುಕೊಳ್ಳಬೇಕು.
ಸಂಚಾರ ನಡೆಸಿದ ನಂತರ ಸಾಬೂನು, ನೀರು ಬಳಸಿ ಕೈಗಳನ್ನು ಶುಚೀಕರಿಸಬೇಕು.
ಜಿಲ್ಲೆಯಲ್ಲಿ ಡೆಂಘೆ ಜ್ವರ ಸಹಿತ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿರುವ ಹಿನ್ನೆಲೆಯಲ್ಲಿ ಸೊಳ್ಳೆ ನಾಶ ಸಹಿತ ಕ್ರಮಗಳನ್ನು ಕೈಗೊಳ್ಳಬೇಕು. ವಾರ್ಡ್ ಮಟ್ಟದ ಶುಚಿತ್ವ ಸಮಿತಿಗಳು ಸಾಮಾಜಿಕ ಅಂತರ ಪಾಲಿಸುವ ಮೂಲಕ ಸಭೆ ಸೇರಿಆರೋಗ್ಯ ಜಾಗ್ರತಾ ಚಟುವಟಿಕೆಗಳನ್ನು ಸಕ್ರಿಯಗೊಳಿಸಬೇಕು ಎಂದು ತಿಳಿಸಲಾಗಿದೆ.