ನವದೆಹಲಿ:ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಲಾಕ್ ಡೌನ್ ಗೆ ಸಂಬಂಧಪಟ್ಟಂತೆ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನಾ ಸಭೆ ನಡೆಸಿದರು.
ಕಳೆದ ತಿಂಗಳು ಮಾರ್ಚ್ 22ರ ನಂತರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿಯವರು ನಡೆಸುತ್ತಿರುವ ನಾಲ್ಕನೇ ವಿಡಿಯೊ ಸಂವಾದ ಸಭೆಯಿದು. ಇಂದಿನ ಸಭೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೈರಾಗಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಪ್ರಧಾನ ಮಂತ್ರಿ ಸಚಿವಾಲಯ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇಂದಿನ ಸಭೆಯಲ್ಲಿ ಕೇರಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಸಮಯ ನೀಡಲಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟೊಮ್ ಜೊಸೆ ಮುಖ್ಯಮಂತ್ರಿಗಳ ಪರವಾಗಿ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೇರಳ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿತ್ತು. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಸಂಬಂಧ ಕೇರಳ ಸರ್ಕಾರ ಕೇಂದ್ರಕ್ಕೆ ಲಿಖಿತ ರೂಪದಲ್ಲಿ ತನ್ನ ಸಲಹೆಗಳನ್ನು ನೀಡಿದೆ. ಹಿಂದಿನ ಮೋದಿಯವರೊಂದಿಗಿನ ಸಭೆಯಲ್ಲಿ ಕೇರಳ ಸರ್ಕಾರಕ್ಕೆ ಮಾತನಾಡಲು ಅವಕಾಶ ನೀಡಲಾಗಿತ್ತು. ಇಂದು ಮಾತನಾಡಲು ಅವಕಾಶವಿಲ್ಲದ ರಾಜ್ಯಗಳು ಲಿಖಿತ ರೂಪದಲ್ಲಿ ತಮ್ಮ ಸಲಹೆಗಳನ್ನು ನೀಡಿವೆ ಎಂದು ತಿಳಿದುಬಂದಿದೆ.
ಮೇ 3ರಂದು ರಾಷ್ಟ್ರಾದ್ಯಂತ ಎರಡನೇ ಸುತ್ತಿನ ಲಾಕ್ ಡೌನ್ ಕೊನೆಯಾಗುತ್ತಿರುವುದರಿಂದ ಇಂದಿನ ಸಭೆ ಮಹತ್ವದ್ದಾಗಿದೆ.