ಕಾಸರಗೋಡು: ಜಿಲ್ಲೆಯಲ್ಲಿ ಕಾಞಂಗಾಡು, ಕಾಸರಗೋಡು ನಗರಸಭೆ, ಕುಂಬಳೆ, ಮಧೂರು, ಚೆಮ್ನಾ ಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು ಗ್ರಾಮ ಪಂಚಾಯಿತಿಗಳನ್ನು ಈಗಾಗಲೇ ಹಾಟ್‍ಸ್ಪೋಟ್ ವಲಯಗಳಾಗಿ ಗುರುತಿಸಲಾಗಿದ್ದು, ಅಜಾನೂರು ಗ್ರಾಮ ಪಂಚಾಯಿತಿಯನ್ನು ಕೂಡಾ ಈ ಪಟ್ಟಿಯಲ್ಲಿ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿ ಕೋವಿಡ್- 19 ವೈರಸ್ ಪೀಡಿತರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬಾಟಲಿಗಳ ತೆರವಿಗೆ ಆದೇಶ:
ತಮ್ಮ ಅಂಗಡಿಗಳ ಮುಂಭಾಗದಲ್ಲಿ ಇರಿಸಲಾಗಿರುವ ಸೋಡಾ ಸಹಿತ ಪಾನೀಯಗಳ ಬಾಟಲಿಗಳನ್ನು ತಕ್ಷಣ ತೆರವುಗೊಳಿಸುವಂತೆ ಇವುಗಳ ನಿರ್ಮಾಣಕಾರರಿಗೆ ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಅಂಗಡಿಗಳ ಹೊರಗಿರಿಸಿರುವ ಬಾಟಲಿಗಳಲ್ಲಿ ನೀರು ದಾಸ್ತಾನುಗೊಂಡು ಸೊಳ್ಳೆ ಸಂತಾನೋತ್ಪತ್ತಿ ನಡೆದು ಸಾಂಕ್ರಾಮಿಕ ರೋಗಗಳ ಹೆಚ್ಚಳ ಭೀತಿಯಿರುವುದರಿಂದ ಈ ಕ್ರಮ ನಡೆಸುವಂತೆ ತಿಳಿಸಲಾಗಿದೆ. ಜಿಲ್ಲೆಯ ಹಾಟ್ ಸ್ಪಾಟ್ ಗಳ ಸಹಿತ ಎಲ್ಲ ಪ್ರದೇಶಗಳಲ್ಲಿ ಈ ಕ್ರಮ ನಡೆಸುವಂತೆ ಅವರು ಹೇಳಿದರು. ಅಂಗಡಿಗಳಲ್ಲಿ ಈಪಾನೀಯಗಳ ಮಾರಾಟ ನಡೆಸಕೂಡದು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.
ದಾದಿಯರಿಗೆ ತರಬೇತಿ:
ಜಿಲ್ಲಾ ಮೆಡಿಕಲ್ ಆಫೀಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಜಂಟಿ ವತಿಯಿಂದ ಖಾಸಗಿ ಆಸ್ಪತ್ರೆಗಳ ದಾದಿಯರಿಗೆ ಕೊರೋನಾ ಸೋಂಕು ನಿಯಂತ್ರಣ ನಿರ್ವಹಣೆ ಸಂಬಂಧ ತರಬೇತಿ ಕಾರ್ಯಕ್ರಮ ಜರುಗಿತು. ಸಾಮಾಜಿಕ ಅಂತರ ಪಾಲಿಸುವ ಮೂಲಕ ಕಾಞಂಗಾಡ್ ದೀಪಾ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ವಿವಿಧ ವಿಚಾರಗಳ ಬಗ್ಗೆ ಡಾ.ರಜಿತ್‍ಕೃಷ್ಣನ್, ಹೆಡ್ ನರ್ಸ್ ಗಳಾದ ಅಚ್ಚಾಮ್ಮ, ಅಲೋಷ್ಯ ಸ್, ಡಾ.ಪ್ರಕಾಶ್ ಕೆ.ವಿ. ಮೊದಲಾದವರು ಮಾಹಿತಿ ನೀಡಿದರು.