ಕಾಸರಗೋಡು: ಭಾರತ ಸಹಿತ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಆವರಿಸಿರುವ ಕೋವಿಡ್ ಕೊರಾನಾ ವೈರಸ್ ತಲ್ಲಣಗಳ ಮಧ್ಯೆ ಜನರಿನ್ನೂ ಬುದ್ದಿ ಕಲಿತಿಲ್ಲ ಎನ್ನುವುದಕ್ಕೆ ಉದಾಹರಣೆಯೊಂದು ನಮ್ಮಿದಿರಿಗಿದ್ದು, ಅದೂ ಕಾಸರಗೋಡಲ್ಲಿ ಎಂದರೆ ನಂಬುತ್ತೀರಾ!
ಕೊರಾನಾ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಬಂದವರನ್ನು ಸಂಪರ್ಕಿಸಿ ಇನ್ನಷ್ಟು ಪರೀಕ್ಷೆಗಳ ಅಗತ್ಯ ಇದೆ ಎಂದು ತಿಳಿಸಿ ಬೆದರಿಸುತ್ತಿರುವ ಘಟನೆ ಕಾಸರಗೋಡಿನ ಖಾಸಗೀ ಆಸ್ಪತ್ರೆಯೊಂದರಿಂದ ಬಂದಿದೆಯೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲೆಯ ಹತ್ತಕ್ಕಿಂತಲೂ ಮಿಕ್ಕಿದ ಕೊರಾನಾ ಚಿಕಿತ್ಸೆಗೊಳಗಾಗಿ ಗುಣಮುಖರಾಗಿ ಹೊರಬಂದ ರೋಗಿಗಳನ್ನು ಸಂಪರ್ಕಿಸಿದ ಖಾಸಗೀ ಆಸ್ಪತ್ರೆಯ ವೈದ್ಯರೊಬ್ಬರು ಈಗ ಗುಣಮುಖರಾದರೂ ಮುಂದೆ ಬಾರದೆಂದಿಲ್ಲ. ಜೊತೆಗೆ ದೇಹದ ಇತರ ಅಂಗಾಂಗಗಳ ಕಾರ್ಯಕ್ಷಮತೆ ನೀವೆಣಿಸಿದಂತೆ ಇರಲಾರದು. ಇದಕ್ಕಾಗಿ ನಮ್ಮ ಆಸ್ಪತ್ರೆಗೆ ತುರ್ತು ಆಗಮಿಸಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕೆಂದು ಪೋನ್ ಮೂಲಕ ಸಂಪರ್ಕಿಸಿ ತಿಳಿಸಿರುವುದಾಗಿ ದೂರಲಾಗಿದೆ. ಇದರ ಹಿಂದೆ ಕಾಂಚಾಣ ಗಳಿಕೆಯ ಕುತ್ಸಿತ ಬುದ್ದಿ ಇರುವುದಾಗಿ ಬಳಿಕ ದೃಢಪಟ್ಟಿದೆ.
ಅಷ್ಟಕ್ಕೂ ಕೊರಾನಾ ಚಿಕಿತ್ಸೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರವೇ ನೇರ ನೀಡಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಎಲ್ಲಾ ಚಿಕಿತ್ಸೆಗಳೂ ಅದೇ ಆಸ್ಪತ್ರೆಯಲ್ಲಿ ನಡೆಸಬೇಕಾದುದು ಕ್ರಮವಾಗಿರುತ್ತದೆ. ಆದರೆ ಗುಣಮುಖರಾದವರನ್ನು ಸಂಪರ್ಕಿಸಿ ಬೆರದರಿಸಿ ಹಣ ಗಳಿಕೆಯ ದಾರಿಕಂಡುಕೊಳ್ಳುವ ಅಲ್ಪತನ ವೇದ್ಯವಾಗಿರುವುದು ರೇಜಿಗೆ ತರಿಸಿದೆ.
ಜೊತೆಗೆ ಕೊರಾನಾ ಚಿಕಿತ್ಸೆಗೊಳಗಾದವರ ಹೆಸರುಗಳನ್ನು ಗೌಪ್ಯವಾಗಿರಿಸಬೇಕೆಂದು ನಿಯಮವಾಗಿದ್ದಾಗಲೂ ಖಾಸಗೀ ವೈದ್ಯರಿಗೆ ಗುಣಮುಖರಾದವರ ಸಂಪರ್ಕ ಸಂಖ್ಯೆ ಹೇಗೆ ಲಭ್ಯವಾಯಿತೆಂಬುದರ ಬಗ್ಗೆ ಹಲವು ಸಂಶಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಎಚ್ಚೆತ್ತಿರುವ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಜೊತೆಗೆ ಆರೋಗ್ಯ ಇಲಾಖೆಯೂ ತನಿಖೆ ನಡೆಸುವುದಾಗಿ ತಿಳಿಸಿದೆ.