ಕಾಸರಗೋಡು: ಕೊರೊನಾ ವೈರಸ್ ಅತೀ ಹೆಚ್ಚು ಆತಂಕ ಸೃಷ್ಟಿಸಿದ ಕೇರಳದ ಕಾಸರಗೋಡು ಸಹಿತ ಉತ್ತರ ವಲಯದಲ್ಲಿ ಚಿಕಿತ್ಸೆ ನೀಡುವುದರಲ್ಲಿ ಮಾದರಿಯಾಗಿ ವಿಶ್ವದಲ್ಲೇ ಗಮನ ಸೆಳೆಯಿತು. 108 ಆ್ಯಂಬುಲೆನ್ಸ್ ಮತ್ತು ಅದರಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಜೈತ್ರ ಯಾತ್ರೆಯ ಭಾಗವಾಗಿ ಗಮನಾರ್ಹ ಸೇವೆಯ ಮೂಲಕ ಸ್ತುತ್ಯರ್ಹರಾಗಿರುವರು. ಕೊರೊನಾ ವೈರಸ್ ಸೋಂಕು ಬಾಧಿಸಿದಲ್ಲಿಂದ ಈ ವರೆಗೆ 6225 ಮಂದಿಯನ್ನು ಸಾಗಿಸಿದ ಆ್ಯಂಬುಲೆನ್ಸ್‍ಗಳು ಒಟ್ಟು 2 ಲಕ್ಷಕ್ಕೂ ಅಧಿಕ ಕಿ.ಮೀ. ಸಂಚರಿಸಿದೆ.
ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಸಹಿತ ಉತ್ತರ ವಲಯದಲ್ಲಿ 45 ಆ್ಯಂಬುಲೆನ್ಸ್‍ಗಳು ರಾತ್ರಿ ಹಗಲೆನ್ನದೆ ಸರ್ವೀಸ್ ನಡೆಸಿದೆ. ಟೆಕ್ನೋ ಪಾರ್ಕ್‍ನಲ್ಲಿ ಮೂರು ಶಿಫ್ಟ್‍ಗಳಲ್ಲಾಗಿ 24 ಗಂಟೆಗಳ ಕಾಲ ಕಾರ್ಯಾಚರಿಸುವ ಕಾಲ್ ಸೆಂಟರ್, ಆಯಾಯ ಜಿಲ್ಲಾ ಕೇಂದ್ರದ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಸಾಗಿಸುವ ಕೆಲಸವನ್ನೂ ಈ ಆ್ಯಂಬುಲೆನ್ಸ್‍ಗಳು ಮಾಡಿವೆ.
108 ಆ್ಯಂಬುಲೆನ್ಸ್‍ಗಳು ಜಿಲ್ಲೆಯ 2320 ಮಂದಿಗಾಗಿ 61000 ಕಿ.ಮೀ. ಸಂಚರಿಸಿದೆ. ಕಣ್ಣೂರಿನಲ್ಲಿ 2780 ಮಂದಿಗಾಗಿ 96617 ಕಿ.ಮೀ., ಕಲ್ಲಿಕೋಟೆಯಲ್ಲಿ 1125 ಮಂದಿಗಾಗಿ 55298 ಕಿ.ಮೀ. ಸರ್ವೀಸ್ ನಡೆಸಿದೆ. ಇದರಲ್ಲಿ ರೋಗಿಗಳೂ, ಶಂಕಿತ ರೋಗಿಗಳೂ ಒಳಗೊಂಡಿದ್ದಾರೆ. ಆ್ಯಂಬುಲೆನ್ಸ್‍ಗಳ ದುರಸ್ತಿ ಕೆಲಸಕ್ಕೆ ಜಿಲ್ಲಾಧಿಕಾರಿಗಳ ಆದೇಶದಂತೆ ವರ್ಕ್ ಶಾಪ್‍ಗಳು ತೆರೆದು ಕಾರ್ಯಾಚರಿಸಿದ್ದರಿಂದ ಯಾವುದೇ ಸಮಸ್ಯೆಗಳು ಎದುರಾಗಿಲ್ಲ.