ನವದೆಹಲಿ: ಮೇ.11 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಲು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘನೆ ಭಾರೀ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾಪಡೆಗಳು ಭಾರೀ ಕಾರ್ಯಾಚರಣೆ ನಡೆಸುತ್ತಿದ್ದು, ಏಪ್ರಿಲ್ ಒಂದೇ ತಿಂಗಳಿನಲ್ಲಿ ಸುಮಾರು 28 ಉಗ್ರರನ್ನು ಹೊಡೆದುರುಳಿಸಿದೆ. ಹೀಗಾಗಿ ಇದರಿಂದ ತೀವ್ರವಾಗಿ ಹತಾಶಗೊಂಡಿರುವ ಉಗ್ರ ಸಂಘಟನೆ ಹಗೆ ತೀರಿಸಿಕೊಳ್ಳುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ಫಿದಾಯನ್ (ಆತ್ಮಾಹುತಿ) ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ದಾಳಿ ಬಗ್ಗೆ ಈಗಾಗಲೇ ಉಗ್ರ ಸಂಘಟನೆಯ ಮುಖ್ಯಸ್ಥ ಜೈಷ್ ಮುಫ್ತಿ ಅಬ್ದುಲ್ ರೌಪ್ ಅಸ್ಗರ್ಹ್ ಹಾಗೂ ಪಾಕಿಸ್ತಾನದ ಐಎಸ್ ಐ ನ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದು, ದಾಳಿಗೆ ಸಿದ್ಧತೆಗಳನ್ನು ನಡೆಸಿದ್ದಾರೆಂದು ತಿಳಿದುಬಂದಿದೆ.
ದಾಳಿ ನಡೆಸುವ ಸಲುವಾಗಿಯೇ ಗಡಿ ನಿಯಂತ್ರಣ ರೇಖೆ ಬಳಿ 25-30 ಉಗ್ರರು ಗಡಿ ನಿಸುಳಲು ಸಿದ್ಧರಾಗಿ ನಿಂತಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.