ಮುಂಬೈ: ದೇಶಾದ್ಯಂತ ಲಾಕ್ ಡೌನ್ ಮೂರನೇ ಹಂತಕ್ಕೆ ಕಾಲಿಟ್ಟು 40 ದಿನಗಳ ಬಳಿಕ ಭಾಗಶಃ ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಿದರೂ ಕೂಡ ಮುಂಬೈ ಷೇರು ಮಾರುಕಟ್ಟೆಯ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 1,500 ಅಂಕ ಕುಸಿದಿದೆ. ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಮತ್ತು ಇನ್ಫೊಸಿಸ್ ಕಂಪೆನಿಯ ಷೇರುಗಳಲ್ಲಿ ಕುಸಿತ ಕಂಡುಬಂದಿದೆ.
30 ಕಂಪೆನಿಯ ಷೇರುಗಳ ಸೂಚ್ಯಂಕ 1,513.68 ಅಂಕ ಅಥವಾ ಶೇಕಡಾ 4.49ರಷ್ಟು ಕುಸಿತ ಕಂಡುಬಂದಿದ್ದು ಸೂಚ್ಯಂಕ 32 ಸಾವಿರದ 203.94ಕ್ಕೆ ಇಳಿಯಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ 425.70 ಅಂಕ ಅಥವಾ ಶೇಕಡಾ 4.32ರಷ್ಟು ಕುಸಿದು 9 ಸಾವಿರದ 434ರಲ್ಲಿ ವಹಿವಾಟು ನಡೆಸಿತು. ನಿನ್ನೆಯ ವಹಿವಾಟು ಆರಂಭಕ್ಕೆ ಶೇಕಡಾ 8ರಷ್ಟು ಕುಸಿದು ಐಸಿಐಸಿಐ ಬ್ಯಾಂಕು ಷೇರು ಅತ್ಯಂತ ಕಡಿಮೆ ಮೊತ್ತಕ್ಕೆ ಮಾರಾಟವಾಯಿತು. ನಂತರದ ಸ್ಥಾನದಲ್ಲಿ ಇಂಡಸ್ ಬ್ಯಾಂಕ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಹೆಚ್ ಡಿಎಫ್ ಸಿ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕುಗಳು ಇವೆ.
ರಿಲಯನ್ಸ್ ಇಂಡಸ್ಟ್ರೀಸ್ ನ ಷೇರುಗಳು ಶೇಕಡಾ 1ರಷ್ಟು ಕುಸಿತ ಕಂಡಿದೆ. ಇಂದಿನ ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದಿದ್ದು ಸನ್ ಫಾರ್ಮಾ ಕಂಪೆನಿಯ ಷೇರು ಮಾರಾಟದಲ್ಲಿ ಮಾತ್ರ.ಕಳೆದ ಶುಕ್ರವಾರ ಮಹಾರಾಷ್ಟ್ರ ದಿನದ ಅಂಗವಾಗಿ ಷೇರು ಮಾರುಕಟ್ಟೆ ಮುಚ್ಚಲ್ಪಟ್ಟಿತ್ತು.
ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆ ಬ್ರೆಂಟ್ ಕಚ್ಚಾತೈಲ ಪ್ರತಿ ಬ್ಯಾರಲ್ ಗೆ 26.41 ಡಾಲರ್ ನಲ್ಲಿ ವಹಿವಾಟು ನಡೆಸಿತು.