ಕಾಸರಗೋಡು: ಕೋವಿಡ್-19 ವಿರುದ್ಧ ಕಾರ್ಯಾಚರಣೆಯಲ್ಲಿ ಶಿಕ್ಷಕರ ಸೇವೆಯನ್ನೂ ಬಳಸಿಕೊಲ್ಳಲು ಸರ್ಕಾರ ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯ ಶಿಕ್ಷಕರನ್ನು ಕೋವಿಡ್ ವಿರುದ್ಧ ಕಾರ್ಯಾಚರಣೆಗೆ ನೇಮಿಸಿಕೊಳ್ಳಲಾಗುವುದು. ಇದಕ್ಕಾಗಿ ಶಿಕ್ಷಕರ ಮಾಹಿತಿ ಒದಗಿಸುವಂತೆ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಆದೇಶಿಸಿದ್ದಾರೆ.
ವಿದೇಶದಲ್ಲಿ ನೆಲೆಸಿರುವವರು ಊರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಇವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಏರ್ಪಡಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯ ಸೇವೆಯ ಅಗತ್ಯ ಮನಗಂಡು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ದಿನದ 24ತಾಸೂ ಕಾಲ ಕಾರ್ಯಾಚರಣೆ ನಡೆಯಲಿದ್ದು, ಇದಕ್ಕಾಗಿ ಮೂರು ಪಾಳಿಯಲ್ಲಿ ಕೆಲಸಕ್ಕೆ ನೇಮಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಇವರಿಗೆ ಸಂಚಾರಕ್ಕೆ ಕೆಎಸ್ಸಾರ್ಟಿಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.
ಮೀನುಗಾರಿಕೆ ಆರಂಭ?:
ನಿಯಂತ್ರಿತ ಮೀನುಗಾರಿಕೆ ಅವಕಾಶಮಾಡಿಕೊಟ್ಟಿರುವ ಸರ್ಕಾರ, ಸೋಮವಾರದಿಂದ ಮತ್ತಷ್ಟು ವಿನಾಯಿತಿಯೊಂದಿಗೆ ಮೀನುಗಾರಿಕೆ ಅನುಮತಿ ನೀಡಿದೆ. ಎಲ್ಲ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳುವ 24ತಾಸುಗಳ ಮೊದಲು ಸಂಬಂಧಪಟ್ಟ ಕಚೇರಿಯಲ್ಲಿ ಮಾಹಿತಿ ನೀಡಬೇಕಾಗಿದೆ. ಯಂತ್ರ ಅಳವಡಿಸಿದ 32ರಿಂದ 45ಅಡಿ ಉದ್ದದ ದೋಣಿಗಳಿಗೆ ಮೀನು ಹಿಡಿಯಲು ಅನುಮತಿ ನೀಡಲಾಗಿದ್ದು, ಕೇರಳ ನೋಂದಾವಣೆಯ ಸಮ-ಬೆಸ ಸಂಖ್ಯೆ ಹೊಂದಿದ ಬೋಟುಗಳು ದಿನ ಬಿಟ್ಟು ದಿನ ಮೀನುಗಾರಿಕೆಗೆ ತೆರಳಬಹುದಾಗಿದೆ. ಆರೋಗ್ಯ ಇಲಾಖೆ ಮಾನದಂಡ ಪಾಲಿಸಿಕೊಂಡು ಕಾರ್ಯಾಚರಿಸುವಂತೆ ಕಾರ್ಮಿಕರಿಗೆ ಆದೇಶ ನೀಡಲಾಗಿದೆ.