ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮತ್ತೆ ಜೋರಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಬರೊಬ್ಬರಿ 2,573 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 42,836ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ವಿವಿಧ ರಾಜ್ಯಗಳಿಂದ 2,573 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 42, 836ಕ್ಕೆ ಏರಿಕೆಯಾಗಿದೆ. ಈ ಪೈಕಿ 11,762 ಮಂದಿ ಸೋಂಕಿತರು ಗುಣಮುಖರಾಗಿದ್ದು, 29, 685 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ 20 ಮಹಾ ನಗರಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬದ್, ದೆಹಲಿ, ಚೆನ್ನೈ ನಗರಗಳಲ್ಲೇ ಹೆಚ್ಚು ಕೊರೋನಾ ಪೀಡಿತರಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಒಂದೇ ದಿನದಲ್ಲಿ 83 ಸಾವು, ಸಾವಿನ ಸಂಖ್ಯೆ 1389ಕ್ಕೆ ಏರಿಕೆ
ನಿನ್ನೆ ಒಂದೇ ದಿನ 83 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1389ಕ್ಕೆ ಏರಿಕೆಯಾಗಿದೆ.