ಪ್ಯಾರಿಸ್: ಕೊರೊನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದಿಂದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಇನ್ನು ಎರಡು ತಿಂಗಳು ವಿಸ್ತರಣೆ ಮಾಡಲು ಫ್ರಾನ್ಸ್ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ಆಲಿವಿಯರ್ ವೆರನ್ ತಿಳಿಸಿದ್ದಾರೆ.
ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಲಾಕ್‍ಡೌನ್ ಈ ತಿಂಗಳು ತೆರವುಗೊಳಿಸುವ ಯೋಚನೆ ಇತ್ತು. ಈಗ ಈ ನಿರ್ಧಾರಕ್ಕೆ ಬಂದರೆ ಮುಂದಿನ ದಿನದಲ್ಲಿ ಮತ್ತಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ವಿದೇಶದಿಂದ ಬರುವ ಜನರು ಕಡ್ಡಾಯವಾಗಿ ಎರಡು ವಾರಗಳ ಕಾಲ ಕ್ವಾರೆಂಟೈನ್ ಆಗಬೇಕು ಎಂದು ಆದೇಶಿಸಿದೆ. ಇನ್ನು ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಸಚಿವ ಕ್ರಿಸ್ಟೋಫ್ ಕ್ಯಾಸ್ಟನರ್ ''ನಾವು ಇನ್ನು ಸ್ವಲ್ಪ ಸಮಯದವರೆಗೆ ವೈರಸ್ನೊಂದಿಗೆ ಬದುಕಬೇಕಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ ಜುಲೈ 24ರ ವರೆಗೂ ಲಾಕ್‍ಡೌನ್ ಮುಂದುವರಿಕೆ ಮತ್ತು ವಿದೇಶದಿಂದ ಬರುವ ಜನರಿಗೆ ಎರಡು ವಾರ ಕಡ್ಡಾಯ ಕ್ವಾರೆಂಟೈನ್ ನಿಯಮವನ್ನು ಸೋಮವಾರ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಬಹುಶಃ ಜಗತ್ತಿನ ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ, ಹಲವು ರಾಷ್ಟ್ರಗಳು ಫ್ರಾನ್ಸ್ ದೇಶದ ನಿರ್ಧಾರವನ್ನು ಅನುಸರಿಸಬಹುದು. ಯಾಕಂದ್ರೆ, ಚೀನಾ ಬಿಟ್ಟರೆ ಬೇರೆ ಯಾವ ದೇಶದಲ್ಲಿ ಕೊರೊನಾ ಮಾಯವಾಗಿಲ್ಲ. ಎಲ್ಲ ದೇಶಗಳಲ್ಲಿಯೂ ಒಂದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೂ ಫ್ರಾನ್ಸ್ ನಲ್ಲಿ 1,68,396 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 24,760 ಜನರು ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ. 50,562 ಜನರು ಸೋಂಕಿನಿಂದ ಹೊರಬಂದಿದ್ದಾರೆ. ಪ್ರಸ್ತುತ ಮೇ 11ರವರೆಗೂ ಲಾಕ್‍ಡೌನ್ ಜಾರಿಯಲ್ಲಿದ್ದು, ಅದಾದ ಬಳಿಕ ಕ್ರಮೇಣ ವಿನಾಯಿತಿ ನೀಡಲು ಸರ್ಕಾರ ಚಿಂತನೆಯಲ್ಲಿದೆ.