ನವದೆಹಲಿ: ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬಂದೇ ಬಿಟ್ಟಿತು ಎಂಬ ಭರವಸೆಯಲ್ಲಿ ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್"ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಮಂಗಳವಾರ ದೇಶದಲ್ಲಿ ಭಾರೀ ಕೊರೋನಾ ಸ್ಫೋಟ ಸಂಭವಿಸಿದೆ. ಒಂದೇ ದಿನ ದೇಶದಾದ್ಯಂದ 2,958 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ಇದೀಗ 50,000 ಗಡಿ ದಾಟುತ್ತಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೊಂಕಿತರ ಸಂಖ್ಯೆ 49,391ಕ್ಕೆ ತಲುಪಿದೆ. ಅಲ್ಲದೆ, 126 ಮಂದಿ ಒಂದೇ ದಿನ ಮಹಾಮಾರಿಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 1,694ಕ್ಕೆ ಏರಿಕೆಯಾಗಿದೆ. ಹೊಸ ಸೋಂಕು ಮತ್ತು ಸಾವಿನ ಪ್ರಮಾಣ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಖಲಾಗಿದ್ದು ಇದೇ ಮೊದಲು.
ಮೇ.4ರಿಂದ ದೇಶದಾದ್ಯಂತ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಬಹುತೇಕ ಚಟುವಟಿಕೆ ಮತ್ತು ಸೇವೆಗಳಿಗೆ, ಕೆಂಪು ವಲಯದಲ್ಲಿ ಸೀಮಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟ ಬೆನ್ನಲ್ಲೇ ಈ ಆಘಾತಕಾರಿ ಅಂಕಿಅಂಶಗಳು ಬೆಳಕಿಗೆ ಬಂದಿದೆ. ಮತ್ತೊಂದೆಡೆ ದೇಶದಾದ್ಯಂತ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾರ್ಮಿಕರು, ಉದ್ಯೋಗಿಗಳ ಆಂತರಿಕ ವಲಸೆ, ಮತ್ತೊಂದೆಡೆ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು ದೇಶದಲ್ಲಿ ಮತ್ತೆ ಕೊರೋನಾ ಮೆಗಾಸ್ಫೋಟದ ಭೀತಿಯನ್ನು ಹುಟ್ಟುಹಾಕಿದೆ. ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 1020 ಕೊರೋನಾ ಸೋಂಕಿತರು ಗುಣುಖರಾಗಿ ಬಿಡುಗಡೆಯಾಗಿದ್ದಾರೆ. ಈ ವರೆಗೆ 14,183 ಜನ ಗುಣಮುಖರಾಗಿದ್ದಾರೆ. ಗುಣ ಹೊಂದಿದವರ ಪ್ರಮಾಣ ಶೇ.28.71ಕ್ಕೂ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲೇ ಅತೀ ಹೆಚ್ಚು ಸೋಂಕು ಮತ್ತು ಸಾವು ದಾಖಲಾಗಿರುವ ಟಾಪ್ 5 ರಾಜ್ಯಗಳಲ್ಲಿ ಮಂಗಳವಾರವೂ ಅದೇ ಕಥೆ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ 841 ಹೊಸ ಪ್ರಕರಣ, 34 ಸಾವು, ತಮಿಳುನಾಡಿನಲ್ಲಿ 500 ಕೇಸು, 02 ಸಾವು, ಗುಜರಾತ್ ರಾಜ್ಯದಲ್ಲಿ 441 ಪ್ರಕರಣ, 49 ಸಾವು ದಾಖಲಾಗಿದೆ.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಒಂದೇ ದಿನ 206 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 5,000ಕ್ಕೆ ಏರಿಕೆಯಾಗಿದೆ.
548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು!
ದೇಶಾದ್ಯಂತ 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಕರೋನ ಸೋಂಕು ತಗುಲಿದೆ.
ಕೇಂದ್ರದ ಅಧಿಕೃತ ಮೂಲಗಳೇ ಮಾಹಿತಿ ನೀಡಿದ್ದು, ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ತಾಂಡವವಾಡುತ್ತಿದೆ. ಆದರೆ ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ರಕ್ಷಿಸಲು ಸದಾ ಕಾರ್ಯ ಪ್ರವೃತರಾಗಿರುವ ವೈದ್ಯಕೀಯ ಸಮುದಾಯದ ಅನೇಕರಿಗೆ ರೋಗದ ಸೋಂಕು ಕಾಣಿಸಿಕೊಂಡಿರುವದು ನಿಜಕ್ಕೂ ಕಳವಳಕಾರಿಯಾಗಿದೆ.
ಕೊರೊನಾವೈರಸ್ ನಿಂದಾಗಿ ದೇಶಾದ್ಯಂತ ಸುಮಾರು 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಸೋಂಕು ತಗುಲಿದೆಯೆಂದು ಕೇಂದ್ರವೇ ನಿರ್ವಹಣೆ ಮಾಡುತ್ತಿರುವ ಕೇಂದ್ರದ ಮೂಲಗಳೆ ಈ ಅಧಿಕೃತ ಮಾಹಿತಿ ನೀಡಿವೆ.