HEALTH TIPS

ಸಮರಸ ಶಬ್ದಾಂತರಂಗ ಸೌರಭ-35-ಬರಹ:ಶ್ರೀವತ್ಸ ಜೋಶಿ. ವಾಶಿಂಗ್ಟನ್ ಡಿ.ಸಿ.

                 ಇಂದಿನ ಟಿಪ್ಪಣಿ   
ಈ ಅಭಿಯಾನದಲ್ಲಿ ನೀವೆಲ್ಲರೂ ಆಸಕ್ತಿಯಿಂದ ಭಾಗವಹಿಸುತ್ತಿರುವುದಕ್ಕಾಗಿ ಮನದಾಳದಿಂದ ಅಭಿನಂದನೆ, ಕೃತಜ್ಞತೆ, ಮತ್ತು ಧನ್ಯವಾದ. 

೧. ನ ಹಿ ನ ಹಿ ರಕ್ಷತಿ ಡುಕೃಞ್ ಕರಣೇ

ಅದ್ವೈತ ತತ್ತ್ವ ಪ್ರತಿಪಾದಕರಲ್ಲಿ ಅಗ್ರಗಣ್ಯರಾದ, ಉಪನಿಷತ್ತುಗಳು, ಭಗವದ್ಗೀತೆ, ಮತ್ತು ಬ್ರಹ್ಮಸೂತ್ರಗಳ ಮೇಲೆ ಆಳವೂ ಮೌಲಿಕವೂ ಆದ ಭಾಷ್ಯಗಳನ್ನು ಬರೆದ ಶ್ರೀ ಶಂಕರಾಚಾರ್ಯರು ರಚಿಸಿದ ಅನೇಕಾನೇಕ ಸ್ತೋತ್ರಗಳಲ್ಲೊಂದು ‘ಮೋಹ ಮುದ್ಗರಮ್’. ಸ್ತೋತ್ರದ ಆ ಹೆಸರಿಗಿಂತ ‘ಭಜ ಗೋವಿಂದಮ್’ ಎಂದರೆ ಎಲ್ಲರಿಗೂ ಸುಲಭದಲ್ಲಿ ಗೊತ್ತಾಗುತ್ತದೆ. ‘ಭಜ ಗೋವಿಂದಮ್’ ಸ್ತೋತ್ರವೆಂದೇ ಅದು ಅತ್ಯಂತ ಜನಪ್ರಿಯವಾಗಿರುವುದು. ಅದರ ಮೊದಲ ಶ್ಲೋಕ ಹೀಗಿದೆ:

ಭಜ ಗೋವಿಂದಂ ಭಜ ಗೋವಿಂದಮ್
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕೃಞ್ ಕರಣೇ ||

ಈ ಶ್ಲೋಕದ ಅರ್ಥತಾತ್ಪರ್ಯವೇನೆಂದರೆ- “ಎಲೈ ಮೂಢ ಮತಿಯುಳ್ಳವನೇ/ಳೇ, ಗೋವಿಂದನನ್ನು ಭಜಿಸು. ಗೋವಿಂದನ ನಾಮಸ್ಮರಣೆ ಮಾಡು. ಅಂತ್ಯಕಾಲವು ಸಮೀಪಿಸಿರುವಾಗ ಈ ‘ಡುಕೃಞ್ ಕರಣೇ’ಗಳೆಲ್ಲ ನಿನ್ನನ್ನು ರಕ್ಷಿಸುವುದಿಲ್ಲ." 

ಶಂಕರಾಚಾರ್ಯರು ಸುತ್ತು ಬಳಸಿ ಹೇಳಿಲ್ಲ, ನೇರವಾದ ಸ್ಪಷ್ಟ ಮಾತು: “ಪ್ರಾಪಂಚಿಕ ನೀತಿನಿಯಮಗಳ ಸುಳಿಯಲ್ಲೇ ಒದ್ದಾಡುತ್ತಿದ್ದರೆ ಎಂದಿಗೂ ನೀನು ಉದ್ಧಾರವಾಗುವುದಿಲ್ಲ. ಅದಕ್ಕಿಂತ ಹೆಚ್ಚಿನದನ್ನು, ಅಂದರೆ ಮೋಕ್ಷಸಾಧನೆಯ ಜ್ಞಾನವನ್ನು ಗಳಿಸುವಂಥವನಾಗು." ಪ್ರಾಪಂಚಿಕ ನೀತಿನಿಯಮಗಳೆಂದರೇನು? ಸಂಪತ್ತು, ಸಂಬಂಧಗಳು, ಸಂಭಾಷಣೆಗೊಂದು ಅರ್ಥಬದ್ಧತೆ ಇವನ್ನೆಲ್ಲ ಉಳಿಸಿ ಬೆಳೆಸುವುದಕ್ಕಾಗಿ ನಾವೇ ಮಾಡಿಕೊಂಡ ನಿಯಮಗಳು. ಸಾಂದರ್ಭಿಕವಾಗಿ ಮತ್ತು ಪ್ರಾನಿನಿಧಿಕವಾಗಿ ಶಂಕರಾಚಾರ್ಯರು ಪಾಣಿನಿಯ ವ್ಯಾಕರಣ ನಿಯಮವೊಂದನ್ನು- ‘ಡುಕೃಞ್ ಕರಣೇ’ ಎಂಬುದನ್ನು- ಉದಾಹರಣೆಯಾಗಿ ಬಳಸಿದ್ದಾರೆ. “ಈ ವ್ಯಾಕರಣ ನಿಯಮಗಳೆಲ್ಲ ನಿನ್ನನ್ನು ಆಪತ್ಕಾಲದಲ್ಲಿ (ಮರಣಕಾಲದಲ್ಲಿ) ರಕ್ಷಿಸುವುದಿಲ್ಲ, ಅದಕ್ಕಿಂತ ಗೋವಿಂದ ನಾಮಸ್ಮರಣೆ ಮಾಡು" ಎಂದು ಅವರ ಮಾತಿನ ಇಂಗಿತ. 

ಹೀಗಿರುವಾಗ, ನಾವೆಲ್ಲ ‘ಸ್ವಚ್ಛ ಭಾಷೆ’, ವ್ಯಾಕರಣ ಅಂತೆಲ್ಲ ಏಕೆ ಸುಮ್ಮನೆ ಹೆಣಗಾಡಬೇಕು? ಇರಲಿ, ಅದರ ಬಗ್ಗೆ ಆಮೇಲೆ ಯೋಚಿಸಿದರಾಯ್ತು. ಆದರೆ ನಾವು ಶಂಕರಾಚಾರ್ಯರ ಹೆಸರನ್ನೇ ತಪ್ಪಾಗಿ ಬರೆಯುವಷ್ಟು ಅಸಡ್ಡೆ ತೋರಬಹುದೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿ ನಿನ್ನೆ ನಡೆದ ಶಂಕರ ಜಯಂತೀ ಆಚರಣೆಯಲ್ಲಿ, ಭಾವಚಿತ್ರದ ಮೇಲೆ ಶ್ರೀ ಶಂಕರಾಚಾರ್ಯರ ಹೆಸರನ್ನು “ಶ್ರೀ ಶಂಕರಾಚರ್ಯರು" ಎಂದು ಬರೆಯಲಾಗಿತ್ತು! ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ದೀಪ ಬೆಳಗಿಸಿ ಪುಷ್ಪಾರ್ಪಣೆ ಮಾಡಿ "ಶ್ರೀ ಶಂಕರಾಚರ್ಯ"ರನ್ನು ವಂದಿಸಿದರು. ಆಚರಣೆಯ ಬಗ್ಗೆ ಆಮೇಲೆ ಟ್ವೀಟ್ ಮಾಡಿದರು. ಟ್ವೀಟ್‌ನಲ್ಲಿ ಸಿ.ಟಿ.ರವಿ ಏನು ಬರೆದುಕೊಂಡರು ಎಂಬುದಕ್ಕಿಂತಲೂ ಶಂಕರಾಚಾರ್ಯರ ಫೋಟೊ ಝೂಮ್ ಮಾಡಿ ನೋಡಿದರು ಸ್ವಚ್ಛ ಭಾಷೆ ಕಲಿಕೆಯ ಸಹಪಾಠಿಗಳಲ್ಲೊಬ್ಬರು ಹಾಸನದಿಂದ ಸುಹಾಸ್ ಬೆಳವಾಡಿ. “ಶಂಕರಾಚರ್ಯರು" ಅಂತಿದೆಯೆಂದು ಗಮನಿಸಿದ್ದು ಅವರೇ. ಕನ್ನಡ ಭವನದಲ್ಲಿ ‘ರವಿ’ಯ ಉಪಸ್ಥಿತಿಯಲ್ಲೇ ಇಂಥದೊಂದು ಅಂಧಕಾರ!

===
೨. ಕನ್ನಡ ‘ಮಾಧ್ಯಮ’ದಲ್ಲಿ ಕಲಿಕೆ

ಅ) “ಪ್ರಧಾನಿ ಮೋದಿ ಶ್ರಮ ಕೊಂಡಾಡಿದ ಬಿಲ್‌ಗೇಟ್ಸ್" [ವಿಶ್ವವಾಣಿ. ೨೩ಎಪ್ರಿಲ್೨೦೨೦] ಭಾರತದಲ್ಲಿ ಕೊರೊನಾ ಹರಡದಂತೆ ತಡೆಯಲು ಮೋದಿ ನಾಯಕತ್ವದ ಸರಕಾರ ದೇಶಾದ್ಯಂತ ಲಾಕ್‌ಡೌನ್ ಜೊತೆಗೆ ಸೋಂಕು ಶಂಕಿತರ ನಿರಂತರ ಪರೀಕ್ಷೆ ನಡೆಸಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಕ್ರಮಗಳು ಅದ್ಭುತ ಫಲಿತಾಂಶಗಳನ್ನು ನೀಡಿವೆ ಎಂದು ಪ್ರಧಾನಿ ಮೋದಿ ಅವರನ್ನು ಬಿಲ್‌ಗೇಟ್ಸ್ ಕೊಂಡಾಡಿದ್ದಾರೆ. ಈ ತಲೆಬರಹದಲ್ಲಿ ಶ್ರಮ ಎಂಬ ಪದ ಇಲ್ಲದಿರುತ್ತಿದ್ದರೆ ಇದು ಕನ್ನಡ ದಿನಪತ್ರಿಕೆಗಳ ಅತಿ ಕೆಟ್ಟ ಚಾಳಿಯೆನಿಸಿರುವ "ಅಜ್ಜಿ ಕೊಂದ ಆನೆ", "ಗಾಂಧಿ ಬೈದ ಭೈರಪ್ಪ", "ಪತ್ನಿ ಕೊಂದ ಪತಿ" ರೀತಿಯ ತಲೆ(ಕೆಟ್ಟ)ಬರಹಗಳ ಸಾಲಿಗೆ ಸೇರುತ್ತಿತ್ತು. "ಪ್ರಧಾನಿ ಮೋದಿ ಕೊಂಡಾಡಿದ ಬಿಲ್‌ಗೇಟ್ಸ್" ಎಂದಷ್ಟೇ ಇರುತ್ತಿದ್ದರೆ ಮೋದಿಯವರು ಬಿಲ್‌ಗೇಟ್ಸ್‌ರನ್ನು ಕೊಂಡಾಡಿದರು ಎಂಬ ತಪ್ಪು ಅರ್ಥ ಬರುತ್ತಿತ್ತು (ಸುದ್ದಿಯ ವಿವರದಲ್ಲಿರುವುದು ಹಾಗಲ್ಲ). ಶ್ರಮ ಎಂಬ ಪದ ಇರುವುದರಿಂದ, ಈ ತಲೆಬರಹದಲ್ಲಿ "ಪ್ರಧಾನಿ ಮೋದಿ ಶ್ರಮ" - ಇದಿಷ್ಟೂ ಕರ್ಮಪದ ಆಗುತ್ತದೆ. ಸಜೀವ ಮತ್ತು ಚಲನೆಯುಳ್ಳದ್ದು ಅಲ್ಲವಾದ್ದರಿಂದ ‘ಅನ್ನು’ ದ್ವಿತೀಯಾ ವಿಭಕ್ತಿ ಪ್ರತ್ಯಯ ಬೇಕಿಲ್ಲ.  ‘ಬಿಲ್‍ಗೇಟ್ಸ್’ ಕರ್ತೃಪದ ಆಗುತ್ತದೆ. ‘ಕೊಂಡಾಡಿದ’ ಕ್ರಿಯಾಪದ. ತಲೆಬರಹವನ್ನು ವ್ಯಾಕರಣಬದ್ಧವಾಗಿ, ಅದಕ್ಕಿಂತಲೂ ಮುಖ್ಯವಾಗಿ ಆಭಾಸಕರ ವಿರೋಧಾರ್ಥ ಬಾರದಂತೆ, ಸರಿಯಾಗಿ ಬರೆಯುವುದಕ್ಕೆ ಇದು ಮಾದರಿ.  

ಆ) "ಮೀನುಗಳ ಸಾವು : ನೀರಿಗೆ ವಿಷ ಪ್ರಾಶನ ಶಂಕೆ" [ಪ್ರಜಾವಾಣಿ. ೨೬ಎಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು ಬೆಂಗಳೂರಿನಿಂದ ವಸುಮತಿ ರಾಮಚಂದ್ರ.]  ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಚಿಕ್ಕಗಾವನಹಳ್ಳಿಯ ಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿದ್ದು, ಕಿಡಿಗೇಡಿಗಳು ನೀರಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ‘ಪ್ರಾಶನ’ ಎಂಬ ಪದಕ್ಕೆ ಪ್ರೊ.ಜಿ.ಎನ್.ಚಕ್ರವರ್ತಿಯವರ ಸಂಸ್ಕೃತ-ಕನ್ನಡ ನಿಘಂಟುವಿನಲ್ಲಿ ಕೊಟ್ಟ ಅರ್ಥ ‘ಆಹಾರ’ ಎಂದು ಮಾತ್ರ. ‘ಪ್ರಾಶ’ ಎಂದರೆ ತಿನ್ನುವುದು. ‘ಪ್ರಾಶನ’ ಪದವನ್ನು ತಿನ್ನಿಸುವುದು, ಉಣಿಸುವುದು ಎಂಬ ಸಂದರ್ಭಗಳಲ್ಲಿಯೂ ಬಳಸುತ್ತೇವೆ. ಉದಾ: ಚಿಕ್ಕ ಮಗುವಿಗೆ ಹಲ್ಲು ಹುಟ್ಟಲಾರಂಭಿಸಿದ ಮೇಲೆ ಮಾಡುವ ಅನ್ನಪ್ರಾಶನ (ಷೋಡಶ ಸಂಸ್ಕಾರಗಳಲ್ಲಿ ಏಳನೆಯದು). ಮಹಾಭಾರತದ ಕಥೆಯಲ್ಲಿ ಕೌರವರು ಲಡ್ಡುಗಳಲ್ಲಿ ವಿಷ ಬೆರೆಸಿ ಭೀಮಸೇನನಿಗೆ ಅವುಗಳನ್ನು ತಿನ್ನಲಿಕ್ಕೆ ಕೊಟ್ಟು ವಿಷಪ್ರಾಶನ ಮಾಡಲು ಯತ್ನಿಸಿದರು ಎಂದು ಓದಿದ್ದೇವೆ. ಆದರೆ ಪ್ರಸ್ತುತ ಶೀರ್ಷಿಕೆಯಲ್ಲಿ, ನೀರಿಗೆ ವಿಷವನ್ನು ತಿನ್ನಿಸುವುದು ಹೇಗೆ? ಅದಕ್ಕಿಂತ, ‘ನೀರಿಗೆ ವಿಷ ಬೆರಕೆ’ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಆದರೆ ಮುಂದೆ ಶಂಕೆ ಎಂಬ ಪದವೂ ಇರುವುದರಿಂದ "ನೀರಿನಲ್ಲಿ ವಿಷ ಬೆರಕೆ ಶಂಕೆ" ಎಂದು ಬರೆದರೆ ಇನ್ನಷ್ಟು ಅರ್ಥಪೂರ್ಣ. "ನೀರಿಗೆ ವಿಷ ಬೆರಕೆ ಶಂಕೆ" ಎಂದು ಬರೆಯಲು ಶಂಕೆ ಬಂದದ್ದು ನೀರಿಗೆ ಅಲ್ಲವಲ್ಲ!? 

ಇ) “ಬೆಂಗಳೂರು ನಿವಾಸಿಯಾಗಿರುವ 50 ವರ್ಷದ ವ್ಯಕ್ತಿಗೆ ಏಪ್ರಿಲ್ 24ರಂದು ಸೋಂಕು ಪತ್ತೆಯಾಗಿ ಬೆಂಗಳೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು." [ವಿಶ್ವವಾಣಿ. ೨೮ಎಪ್ರಿಲ್೨೦೨೦] ಕಳೆದ ವಾರದ ಕಲಿಕೆಯಲ್ಲಿ ತಿಳಿಸಿರುವಂತೆ ‘ನಿಗದಿತ’ ಸರಿ, ನಿಗಧಿತ ಎಂದು ಬರೆಯುವುದು ತಪ್ಪು. ಆದರೇನು ಮಾಡುವುದು, COVID-19ಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ಯ ಪತ್ರಿಕಾಪ್ರಕಟಣೆಯಲ್ಲಿ ಈಗಲೂ ‘ನಿಗಧಿತ ಆಸ್ಪತ್ರೆ’ ಎಂದೇ ಅಚ್ಚಾಗಿರುತ್ತದೆ. ಅದನ್ನಾಧರಿಸಿ ಸುದ್ದಿ ಬರೆದ ವಿಶ್ವವಾಣಿಯ ಪತ್ರಕರ್ತರು ಬಹುಶಃ ಆಸ್ಪತ್ರೆಯ ಹೆಸರೇ ‘ನಿಗಧಿತ’ ಎಂದುಕೊಂಡರೋ ಏನೋ. 

ಈ) “ಪ್ರಶ್ನೆಯಾದ ಪುನಾರಂಭ" [ವಿಜಯವಾಣಿ. ೨೫ಎಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು ಶಿರಸಿಯಿಂದ ಶ್ರೀಹರ್ಷ ಹೆಗಡೆ.] ಲಾಕ್‌ಡೌನ್ ತೆರವುಗೊಳಿಸುವುದರ ಬಗೆಗಿನ ಸುದ್ದಿಯ ತಲೆಬರಹ. ಇಲ್ಲಿ ‘ಪುನಾರಂಭ’ ಎಂಬ ಪದ ತಪ್ಪು. ಅದು ‘ಪುನರಾರಂಭ’ ಎಂದಾಗಬೇಕು. ಸಂಸ್ಕೃತದಲ್ಲಿ ವಿಸರ್ಗಸಂಧಿಯ ಪ್ರಕಾರ ಪುನಃ + ಆರಂಭ = ಪುನರ್ + ಆರಂಭ = ಪುನರಾರಂಭ. ಇಲ್ಲಿ ಪರಪದದ ಆದಿಯಲ್ಲಿ ಸ್ವರಾಕ್ಷರವಿರುವುದರಿಂದ ಪೂರ್ವಪದದ ಅಕ್ಷರಗಳಲ್ಲೇನೂ ಬದಲಾವಣೆಯಾಗುವುದಿಲ್ಲ. ಒಂದುವೇಳೆ ಪುನಃ + ರಚನೆ ಎಂಬ ಪದಗಳ ಸಂಧಿಯಾದರೆ ಅದು ಪುನರ್ + ರಚನೆ ಆಗಿ ‘ಪುನಾರಚನೆ’ ಎಂದಾಗುತ್ತಿತ್ತು. ಪರಪದದ ಆದಿಯಲ್ಲಿ ರಕಾರ ವ್ಯಂಜನವಿರುವುದರಿಂದ ಪೂರ್ವಪದವು ‘ಪುನರ್’ ಅಂತಿರುವುದು ‘ಪುನಾ’ ಎಂದಾಗುತ್ತಿತ್ತು.  ಅಂತರ್ + ರಾಷ್ಟ್ರೀಯ = ಅಂತಾರಾಷ್ಟ್ರೀಯ ಎಂದಾಗುವುದೂ ಇದೇ ನಿಯಮದಡಿ. 

ಉ) “P52 ಉದ್ಯೋಗಿಗೆ ಯಾವುದೇ ಟ್ರಾವೆಲ್ ಇಸ್ಟರಿ ಇಲ್ಲ" [NEWS18 ಕನ್ನಡ ಸುದ್ದಿವಾಹಿನಿ. ೯ಎಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು ಕಾರ್ಕಳದಿಂದ ದುರ್ಗಾರಾಮ್ ಶೆಣೈ]. ಕನ್ನಡ ಸುದ್ದಿವಾಹಿನಿಗಳಿಗಿರುವಷ್ಟು ಇಂಗ್ಲಿಷ್ ವ್ಯಾಮೋಹ ಬೇರಾರಿಗೂ ಇಲ್ಲ. ಹೋಗಲಿ ಇಂಗ್ಲಿಷನ್ನಾದರೂ ಸರಿಯಾಗಿ ಬರೆಯುತ್ತವೆಯೇ? ಅದೂ ಇಲ್ಲ! ‘ಹಿಸ್ಟರಿ’ ಅಂತ ಬರೆಯಲಿಕ್ಕೆ ‘ಇಸ್ಟರಿ’ ಎಂದು ಬರೆದು ಇನ್ನೊಂದು ಆ-ಹಾಕಾರ. ಹೊಸ ಸುದ್ದಿಯೇನೆಂದರೆ ಈ NEWS18 ಕನ್ನಡ ಸುದ್ದಿವಾಹಿನಿಯ ಪತ್ರಕರ್ತನೊಬ್ಬನಿಗೆ COVID-19 ತಗುಲಿದೆಯಂತೆ. ಪಾದರಾಯನಪುರಕ್ಕೆ ಪಾದ ಬೆಳೆಸಿದ್ದೇ ಆತನ ‘ಇಸ್ಟರಿ’! 

===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು

ಅ) ಸ್ನಿಗ್ಧ ಸರಿ. ಚಿತ್ರನಟಿ ಲಕ್ಷ್ಮಿ ಸಿನಿಮಾಜೀವನದ ಬಗ್ಗೆ ದಿಗ್ವಿಜಯ ಸುದ್ದಿವಾಹಿನಿಯಲ್ಲಿ "ಅಣ್ಣಾವ್ರ ಚಿತ್ರಗಳಿಗೆ ನಾಯಕಿಯಾದ ಸಿಗ್ಧ ಸುಂದರಿ" ಎಂದೇ ತೋರಿಸಿದರು. [ಗಮನಿಸಿ ಕಳುಹಿಸಿದವರು: ರವಿ ಜಾನೇಕಲ್] 
 
ಆ) ಸಡ್ಡು ಸರಿ. ‘ಕುಸ್ತಿಗಾರರು ಭುಜ ಅಥವಾ ತೊಡೆಯನ್ನು ತಟ್ಟಿಕೊಳ್ಳುವುದು’ ಎಂದು ಪ್ರೊ.ಜಿ.ವೆಂಕಟಸುಬ್ಬಯ್ಯನವರು ಶಬ್ದಕೋಶದಲ್ಲಿ ಅರ್ಥ ಕೊಟ್ಟಿದ್ದಾರೆ. ಸಮ, ಸಾಟಿ ಎಂಬ ಅರ್ಥಗಳನ್ನೂ ಕೊಟ್ಟಿದ್ದಾರೆ. ಅನೇಕರು ಇದನ್ನು ‘ಸೆಡ್ಡು’ ಎಂದು ತಪ್ಪಾಗಿ ಬರೆಯುತ್ತಾರೆ. “ಕರೋನಾಗೆ ಸೆಡ್ಡು ಹೊಡೆದ ಕಾಫಿನಾಡು" [ವಿಶ್ವವಾಣಿ. ೨೯ಎಪ್ರಿಲ್೨೦೨೦] ಎಂಬ ತಲೆಬರಹ ತಾಜಾ ಉದಾಹರಣೆ.

ಇ) ಆಶೀರ್ವಾದ ಸರಿ. "ತಂದೆತಾಯಿಯರ ಆರ್ಶಿವಾದ" ಎಂದು ಬರೆದಿರುವ ಆಟೊರಿಕ್ಷಾಗಳ ಸಂಖ್ಯೆ ಬೆಂಗಳೂರಿನಲ್ಲಿ ಎಷ್ಟಿರಬಹುದು!? 

ಈ) ಸೂಚ್ಯಂಕ ಸರಿ. ಸೂಚಿ + ಅಂಕ = ಸೂಚ್ಯಂಕ. ಯಣ್ ಸಂಧಿ. ಉದಯವಾಣಿ, ಕನ್ನಡಪ್ರಭ ಮುಂತಾದ ಪ್ರಮುಖ ಪತ್ರಿಕೆಗಳಲ್ಲೂ ‘ಸೂಚ್ಯಾಂಕ’ ಎಂದು ತಪ್ಪು ಬರೆದಿರುವುದು ಕಾಣಸಿಗುತ್ತದೆ.

ಉ) ನಮೋನಮಃ ಸರಿ. ಮತ್ತೆ ಮತ್ತೆ ನಮಸ್ಕರಿಸುವೆ ಎಂಬ ಭಾವಾರ್ಥ. ನಮೋನ್ನಮಃ ಎಂದು ಬರೆಯುವುದು ತಪ್ಪು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries