ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಲವ ಮತ್ತು ಕುಶ. ಕನ್ನಡದಲ್ಲಿ ಬರೆಯುವಾಗ ಲವ್ ಕುಶ್ ಅಲ್ಲ!
ದೇವನಾಗರಿ ಅಥವಾ ಅದನ್ನು ಹೋಲುವ ಲಿಪಿಯನ್ನು ಬಳಸುವ ಹಿಂದೀ, ಮರಾಠಿ ಮತ್ತಿತರ ಭಾಷೆಗಳಲ್ಲಿ ಪದಗಳ ಕೊನೆಯ ಅಕ್ಷರವನ್ನು ವ್ಯಂಜನಾಕ್ಷರದಂತೆ ಅರ್ಧವಾಗಿ ಉಚ್ಚರಿಸುವ ರೂಢಿ ಇದೆ. ಆದರೆ ಬರೆಯುವಾಗ ಮಾತ್ರ ಪೂರ್ಣವಾಗಿ ಬರೆಯಲಾಗುತ್ತದೆ. ಉದಾಹರಣೆಗೆ- ಕೇಶವ, ನಾರಾಯಣ, ಮಾಧವ, ಗೋವಿಂದ... ಎಂದು ಬರೆದರೂ ಈ ಭಾಷೆಗಳಲ್ಲಿ ಉಚ್ಚಾರ ಅನುಕ್ರಮವಾಗಿ ಕೇಶವ್, ನಾರಾಯಣ್, ಮಾಧವ್, ಗೋವಿಂದ್ - ಹೀಗೆ ಇರುತ್ತದೆ. ಇಂತಹ ಹೆಸರುಗಳನ್ನು ಕನ್ನಡದಲ್ಲಿ ಬರೆಯುವಾಗ ಪೂರ್ಣಾಕ್ಷರದಲ್ಲೇ ಅಂದರೆ ವ್ಯಂಜನಾಕ್ಷರಗಳಿಗೆ ಸ್ವರ ಸೇರಿಸಿಯೇ ಬರೆಯಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯ ಹೆಸರು ಲವ ಅಗರವಾಲ. ಅದು ಇಂಗ್ಲಿಷ್‌ನಲ್ಲಿ Lav Agarwal ಎಂದು ಇದ್ದಮಾತ್ರಕ್ಕೇ ಕನ್ನಡದಲ್ಲಿ ಲವ್ ಅಗರವಾಲ್ ಎಂದು ಬರೆಯಲಾಗದು. ಕನ್ನಡಪ್ರಭ ೪ಮೇ೨೦೨೦ರ ಸಂಚಿಕೆಯಲ್ಲಿ ಲವ್ ಅಗರವಾಲ್ ಎಂದು ಬರೆದಿದ್ದಾರೆ. ಲವ, ಕುಶ ಇತ್ಯಾದಿ ಹೆಸರುಗಳು ಉತ್ತರಭಾರತದಲ್ಲಿ ಸಾಮಾನ್ಯವಾಗಿ ಇರುತ್ತವೆ (ಕುಶ ಭಾವು ಠಾಕ್ರೆ ಈಹಿಂದೆ ಭಾಜಪ ಅಧ್ಯಕ್ಷರಾಗಿದ್ದರು). ಹಾಗೆ ನೋಡಿದರೆ ಅಗರವಾಲ ಎಂಬ ಉಪನಾಮಧೇಯವನ್ನೂ ಅಗ್ರವಾಲ ಎಂದು ಬರೆದರೆ ಹೆಚ್ಚು ಸೂಕ್ತ. ವ್ಯಾಪಾರಿ ಸಮುದಾಯವೊಂದರ ಮೂಲಪುರುಷ ಅಗ್ರಸೇನ ಮಹಾರಾಜರ ಹೆಸರಿನಿಂದಾಗಿ ಈ ಉಪನಾಮಧೇಯ ಶುರುವಾದದ್ದಂತೆ. ಉತ್ತರಭಾರತದ ಭಾಷೆಗಳಲ್ಲಿ ಹೆಸರುಗಳ ಉಚ್ಚಾರ ಸ್ವಲ್ಪ ಭಿನ್ನವಾಗಿರುವುದುಂಟು. ಇಂದ್ರ ಎನ್ನುವುದಕ್ಕೆ ಇಂದರ್ ಎನ್ನುವ ರೂಢಿಯಿದೆ (ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್). ಪ್ರಜ್ಞಾ ಎಂಬುದಕ್ಕೆ ಪ್ರಗ್ಯಾ ಎನ್ನುತ್ತಾರೆ. ಜ್ಞಾನಿ ಜೇಲ್ ಸಿಂಗ್ ಎನ್ನುವ ಹೆಸರನ್ನು ಗ್ಯಾನಿ ಜೇಲ್ ಸಿಂಗ್ ಎಂದು ನಮ್ಮವರು ರೂಪಾಂತರಿಸಿದರು. ಇವನ್ನೆಲ್ಲ ಕನ್ನಡದಲ್ಲಿ ಸರಿಯಾಗಿ ಬರೆದು ಜನರಿಗೂ ರೂಢಿ ಮಾಡಿಸಬಹುದಿತ್ತು. ಆದರೆ ಮಾಡಬೇಕಾದವರೇ ತಪ್ಪು ಮಾಡಿದರೆ ಯಾರನ್ನು ದೂರುವುದು?
ಅಂದಹಾಗೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯ ಹೆಸರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಲವ ಎಂದು ಸರಿಯಾಗಿಯೇ ಅಚ್ಚಾಗಿದೆ. ಇದು ಸಹಜವೇ. ಹುಬ್ಬಳ್ಳಿ ಧಾರವಾಡ ಮತ್ತು ಒಟ್ಟಾರೆಯಾಗಿ ಉತ್ತರಕರ್ನಾಟಕದಲ್ಲಿ ಮರಾಠಿ ಪ್ರಭಾವದಿಂದಾಗಿ, ಉಚ್ಚಾರದಲ್ಲಿ ಅರ್ಧಾಕ್ಷರದಿಂದ ಅಂತ್ಯವಾಗುವ ಹೆಸರುಗಳನ್ನು ಬರೆಯುವಾಗ ಪೂರ್ಣಾಕ್ಷರದಿಂದ ಅಂತ್ಯವಾಗುವಂತೆ ಬರೆಯುವುದು ರೂಢಿ. ಹಾಗಾಗಿಯೇ ನಮಗೆ “ಮೊಹಮ್ಮದ ಅಬೂಬಕರ ಆ್ಯಂಡ ಸನ್ಸ. ಜನರಲ ಕ್ಲಾಥ ಮರ್ಚಂಟ್ಸ. ಕೊಪ್ಪೀಕರ ರೋಡ", “ದ ಗದಗ ಅರ್ಬನ ಕೊ-ಆಪರೇಟಿವ ಬ್ಯಾಂಕ", "ಮಲಬಾರದವರ ಹೊಟೇಲ" ಮುಂತಾದ ಫಲಕಗಳು ಅಲ್ಲಿ ಓದಲಿಕ್ಕೆ ಸಿಗುವುದು. “ರೋಮ ಹೊತ್ತಿ ಉರಿಯುತ್ತಿದೆ" ಎಂದೇನಾದರೂ ವಾಕ್ಯ ಸಿಕ್ಕಿದರೆ ಅದನ್ನು “ರೋಮ್ ಹೊತ್ತಿ ಉರಿಯುತ್ತಿದೆ (ಆದರೂ ನೀರೊ ಪಿಟೀಲು ಬಾರಿಸುತ್ತಿದ್ದಾನೆ)" ಎಂದು ಓದಬೇಕಾಗುವುದು.
[ಈ ಟಿಪ್ಪಣಿಯ ಬಹುಭಾಗವು ಹುಬ್ಬಳ್ಳಿಯಿಂದ ಅನಂತರಾಜ ಮೇಲಾಂಟ ಅವರ ಕೊಡುಗೆ.]
===
೨. ಈ ವಾರ ಕನ್ನಡ ಪತ್ರಿಕೆಗಳು ಜಡಿದಿರುವ ಆಣಿ-ಮುತ್ತುಗಳು
‘ಆಣಿ’ ಅಂದರೆ ಮೊಳೆ. ಕನ್ನಡ ಪತ್ರಿಕೆಗಳು ನಟ್ಟಿರುಳಿನಲ್ಲಿ (ಪತ್ರಿಕೆ ಮುದ್ರಣವಾಗುವಾಗ) ಕನ್ನಡ ಭಾಷೆಯನ್ನು ಕೊಂದು ಶವಪೆಟ್ಟಿಗೆಯ ಮೇಲೆ ಹೊಡೆಯುವ ಮೊಳೆಗಳಿವು.
ಅ) “ಹಾಲು ತರಿಸುವ ನೆಪದಲ್ಲಿ ಸೊಸೆ ಹೊರಹಾಕಿದ ಅತ್ತೆ, ಮಾವ!" [ಕನ್ನಡಪ್ರಭ. ೨ಮೇ೨೦೨೦. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ವಿನುತಾ ಕಿರಣ್]. ಈ ತಲೆಬರಹವನ್ನೋದಿ, ಎಂತಹ ಕ್ರೂರಿಯಿರಬಹುದು ಆ ಸೊಸೆ ಎಂದುಕೊಂಡು ಮನಸ್ಸಿನಲ್ಲೇ ಹಿಡಿಶಾಪ ಹಾಕಬೇಡಿ! ಪಾಪ, ಹೊರಹಾಕಿದ್ದು ಅವಳಲ್ಲ. ಬದಲಿಗೆ, ಆಕೆಯನ್ನು ಅತ್ತೆ ಮಾವ ಹೊರಹಾಕಿದ್ದು. ಹಾಸನದ ಬಸಟ್ಟಿಕೊಪ್ಪಲು ಗ್ರಾಮದಲ್ಲಿ ನಡೆದ ಘಟನೆ. ಸೊಸೆಯನ್ನು ಹಾಲು ತರಲು ಕಳಿಸಿದ ಅತ್ತೆ-ಮಾವ, ಆಕೆ ಮನೆಗೆ ಮರಳುವಷ್ಟರಲ್ಲಿ ಬೀಗ ಹಾಕಿಕೊಂಡು ಕಾರಿನಲ್ಲಿ ಹೊರಹೋಗಿದ್ದಾರೆ. ಈ ತಲೆಬರಹವನ್ನು ಕೆತ್ತಿದ ಪತ್ರಕರ್ತರಿಗೊಂದು ಪ್ರಶ್ನೆ: “ಸೊಸೆ ತಂದ ಸೌಭಾಗ್ಯ" ಅಂತೊಂದು ಕನ್ನಡ ಸಿನೆಮಾ ಬಂದಿತ್ತು. "ಸೊಸೆ ತಂದ ಸೌಭಾಗ್ಯ" ಅಂದರೆ ಸೌಭಾಗ್ಯವನ್ನು ಸೊಸೆ ತಂದಳು ಎಂದು ಅರ್ಥ ತಾನೆ? ಹಾಗಾದರೆ ಮೇಲಿನ ತಲೆಬರಹವನ್ನು "ಅತ್ತೆ-ಮಾವರನ್ನು ಸೊಸೆ ಹೊರಹಾಕಿದಳು" ಎಂದು ಓದುಗರು ಏಕೆ ಅರ್ಥೈಸಿಕೊಳ್ಳಬಾರದು?
ಆ) “ಇಷ್ಟು ನಿಯಮಗಳಿದ್ದರೂ ಬಿಬಿಎಂಪಿ ಸಿಬ್ಬಂದಿ ಅಧಿಕಾರಿಗಳ ಸೂಚನೆ ಮೇರೆಗೆ ಆತ್ಮಹತ್ಯೆ ಮಾಡಿಕೊಂಡ ಸೋಂಕಿತನ ಅಂತ್ಯಸಂಸ್ಕಾರದ ನಂತರ ತಾವು ಧರಿಸಿದ್ದ ಪಿಪಿಇಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ." [ವಿಜಯವಾಣಿ. ೩೦ಎಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು: ಶ್ರೀಕೃಷ್ಣ ಎಸ್.] 20 ಪದಗಳ ಈ ಭರ್ಜರಿ ವಾಕ್ಯವನ್ನು ಓದಿ ಮುಗಿಸುವ ಹೊತ್ತಿಗೆ ನಿಮ್ಮ ಮೆದುಳು ಅರ್ಧ ಸತ್ತು ಹೋಗಿಲ್ಲವೆಂದುಕೊಳ್ಳೋಣ. ಸೋಂಕಿತನೇನೋ ಬಿಬಿಎಂಪಿ ಸಿಬ್ಬಂದಿ ಅಧಿಕಾರಿಗಳ ಸೂಚನೆ ಮೇರೆಗೆ ಆತ್ಮಹತ್ಯೆ ಮಾಡಿಕೊಂಡ. ಇನ್ನೊಬ್ಬರ ಸೂಚನೆಯ ಮೇರೆಗೆ ಸತ್ತರೆ ಅದು ಆತ್ಮಹತ್ಯೆ ಆಗುತ್ತದೆಯೋ? ಆ ಇನ್ನೊಬ್ಬರು ಮಾಡಿದ ಕೊಲೆ ಎನಿಸುತ್ತದೆಯೋ? ಗೊತ್ತಿಲ್ಲ. ಆದರೆ ಪಿಪಿಇಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದು ಹೋದವರಾರು ಎಂದು ನಿಮಗೆ ಈ 20 ಪದಗಳ ಪೈಕಿ ಯಾವುದೂ ತಿಳಿಸುವುದಿಲ್ಲ!
ಇ) “ಅನಪಡ್ ಶಿಕ್ಷಕರನ್ನು ನೇಮಿಸಿದರೆ ರೂ. 5 ಲಕ್ಷ ದಂಡ!" [ವಿಶ್ವವಾಣಿ. ೧ಮೇ೨೦೨೦. ಗಮನಿಸಿ ಕಳುಹಿಸಿದವರು: ಶ್ರೇಯಸ್ ಹೊನ್ನಕೆರೆ]. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅರ್ಹತೆಯಿಲ್ಲದವರನ್ನೂ ಶಿಕ್ಷಕರನ್ನಾಗಿಸಲಾಗುತ್ತಿದೆ ಎನ್ನುವುದು ಈ ಸುದ್ದಿಯಲ್ಲಿರುವ ಅಹವಾಲು. ಅಂಥವರನ್ನು ‘ಅನಪಡ್’ ಎನ್ನಲು ಆಧಾರವೇನು? ಕನ್ನಡ ಪತ್ರಿಕೆಯ ತಲೆಬರಹದಲ್ಲಿ ಹಿಂದೀ ಪದ ಬಳಕೆಗೆ ಪ್ರಾಶಸ್ತ್ಯ ಏಕೆ? ಹೋಗಲಿ, ಅದನ್ನು ಸರಿಯಾಗಿ "ಅನಪಢ್" ಎಂದಾದರೂ ಬರೆಯಬೇಡವೇ? ಅನಪಢ್ (ಒಂದಕ್ಷರವನ್ನೂ ಓದುವುದು/ಬರೆಯುವುದು ಮಾಡದ) ವ್ಯಕ್ತಿ ಶಿಕ್ಷಕನಾಗುವುದು ಹೇಗೆ? ಅದಕ್ಕಿಂತ, ‘ಅನರ್ಹರನ್ನು ಶಿಕ್ಷಕರಾಗಿ ನೇಮಿಸಿದರೆ ರೂ 5. ಲಕ್ಷ ದಂಡ!’ ಎಂದು ತಲೆಬರಹ ಕೊಡುತ್ತಿದ್ದರೆ ಇಷ್ಟೆಲ್ಲ ಗೊಂದಲವೇ ಇರುತ್ತಿರಲಿಲ್ಲ.
ಈ) “ಉಸಿರಾಟದ ತೊಂದರೆಗೆ ವೃದ್ಧರಿಬ್ಬರ ಸಾವು" [ವಿಜಯಕರ್ನಾಟಕ. ೩ಮೇ೨೦೨೦]; “ಅಪೌಷ್ಟಿಕತೆಗೆ ಹಸುಳೆಗಳ ಸಾವು" [ವಿಜಯಕರ್ನಾಟಕ. ೪ಮೇ೨೦೨೦. ಎರಡೂ ಶೀರ್ಷಿಕೆಗಳನ್ನು ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಮಂಜುನಾಥ ಡಿ.ಎಸ್]. ತಲೆಬರಹಗಳಲ್ಲಿ ವಿಭಕ್ತಿಪ್ರತ್ಯಯ ಬಳಸಿರಯ್ಯಾ ಎಂದರೆ ತಪ್ಪುತಪ್ಪಾಗಿ ಬರೆಯುತ್ತಾರೆ. "ತೊಂದರೆಯಿಂದ" ಎಂದು ಪಂಚಮೀ ವಿಭಕ್ತಿ ಬಳಸಬೇಕಾದಲ್ಲಿ "ತೊಂದರೆಗೆ" ಎಂದು ಚತುರ್ಥೀ ವಿಭಕ್ತಿ ಬಳಸುತ್ತಾರೆ. "ಅಪೌಷ್ಟಿಕತೆಯಿಂದ" ಎಂದು ಪಂಚಮೀ ವಿಭಕ್ತಿ ಬಳಸಬೇಕಾದಲ್ಲಿ "ಅಪೌಷ್ಟಿಕತೆಗೆ" ಎಂದು ಚತುರ್ಥೀ ವಿಭಕ್ತಿ ಬಳಸುತ್ತಾರೆ. ಸುದ್ದಿವಿವರದಲ್ಲಿ ಸರಿಯಾಗಿ ಪಂಚಮೀ ವಿಭಕ್ತಿಯನ್ನೇ ಬಳಸಿದ್ದಿರುತ್ತದೆ. ಅಂದರೆ ತಲೆಬರಹ ಮತ್ತು ಸುದ್ದಿವಿವರ ಒಂದಕ್ಕೊಂದು ವಿರುದ್ಧ! “ಅಪೌಷ್ಟಿಕತೆಗೆ ಹಸುಳೆಗಳ ಸಾವು" ಎಂಬುದಂತೂ ಅನರ್ಥಕಾರಿ ವಾಕ್ಯ. ಅಪೌಷ್ಟಿಕತೆ ಉಂಟಾಗುವಂತೆ ಹಸುಳೆಗಳನ್ನು ಬಲಿ ಕೊಡಲಾಯಿತು ಎಂಬ ಅರ್ಥ ಬರುತ್ತದೆ! ಮೊದಲನೆಯದನ್ನು "ಉಸಿರಾಟದ ತೊಂದರೆ : ವೃದ್ಧರಿಬ್ಬರ ಸಾವು" ಎಂದು ಅರ್ಧವಿರಾಮ ಹಾಕಿ ಬರೆಯಬಹುದಲ್ಲ?
ಉ) “ಬೋರಿಸ್ ಪುತ್ರನಿಗೆ ಚಿಕಿತ್ಸೆ ನೀಡಿದ ವೈದ್ಯರ ಹೆಸರು" [ವಿಶ್ವವಾಣಿ. ೪ಮೇ೨೦೨೦]. ಇದೇನು ಪತ್ರಿಕೆಯ ತಲೆಬರಹವೋ ಅಥವಾ, ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ‘ಬಿಟ್ಟ ಸ್ಥಳ ತುಂಬಿ’ ರೀತಿಯ ಪ್ರಶ್ನೆಯೋ? ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್‌ನ ಪುತ್ರನಿಗೆ ವೈದ್ಯರ ಹೆಸರಿಟ್ಟದ್ದೇನೋ ನಿಜ. ಆದರೆ ಆ ವೈದ್ಯ ಆ ಮಗುವಿಗೇನೂ ಚಿಕಿತ್ಸೆ ನೀಡಿಲ್ಲ! ಚಿಕಿತ್ಸೆ ನೀಡುವ ಆವಶ್ಯಕತೆಯೂ ಬಂದಿಲ್ಲ. ಚಿಕಿತ್ಸೆ ನೀಡಿದ್ದು ಬೋರಿಸ್ ಜಾನ್ಸನ್‌ಗೆ, ಅವರು ಕೊರೊನಾವೈರಸ್ ಸೋಂಕಿತರಾದಾಗ.
ಊ) “ನಿತ್ಯೋತ್ಸವ ಕವಿ ನಿಧನ : ಅಪಾರ ನಷ್ಟ" [ಹೊಸದಿಗಂತ. ೫ಮೇ೨೦೨೦. ಗಮನಿಸಿ ಕಳುಹಿಸಿದವರು: ದಿಲೀಪ್ ಶಿವಮೊಗ್ಗ]. ಪ್ರಕೃತಿವಿಕೋಪಗಳ ಸುದ್ದಿಯಲ್ಲಿ, ಮಾನವ ನಿರ್ಮಿತ ವಿಧ್ವಂಸಕ ಕೃತ್ಯಗಳ ಸುದ್ದಿಯಲ್ಲಿ "ಅಪಾರ ನಷ್ಟ" ಎಂಬ ಬಳಕೆ ಸಾಮಾನ್ಯ. ನಿಧನವಾರ್ತೆಯಲ್ಲಿ ಹೆಚ್ಚಾಗಿ "ತುಂಬಲಾರದ ನಷ್ಟ" ಎಂಬ ಕ್ಲೀಷೆಯೇ ಬಳಕೆಯಾಗುವುದು. ಭೌತಿಕ ಆಸ್ತಿಪಾಸ್ತಿ ನಷ್ಟವಾದಾಗ “ಅಪಾರ ನಷ್ಟ" ಎಂದು ಓದಿಓದಿ ಅಭ್ಯಾಸವಾಗಿರುವವರಿಗೆ ಈ ತಲೆಬರಹದಲ್ಲಿ “ಅಪಾರ ನಷ್ಟ" ವಿಚಿತ್ರವೆನಿಸುತ್ತದೆ. “ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ನಿಧನದಿಂದ ಸಾಹಿತ್ಯ ಮತ್ತು ವಾಘ್ಮಯ ಲೋಕಕ್ಕೆ ನಷ್ಟವುಂಟಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತನ್ನ ಸಂತಾಪ ಸೂಚಿಸಿದೆ." - ಇದು ಸುದ್ದಿವಿವರದ ಮೊದಲ ವಾಕ್ಯ. ಇಲ್ಲಿ ‘ವಾಘ್ಮಯ’ ಎಂಬ ಘನಘೋರ (ತಪ್ಪಾಗಿರುವ) ಪದದ ಅರ್ಥವೇನಿರಬಹುದು? ಅದು ವಾಕ್ + ಮಯ = ವಾಙ್ಮಯ (ಅನುನಾಸಿಕ ಸಂಧಿಯಿಂದಾದ ಪದ) ಆಗಬೇಕಿತ್ತು. ಮರಾಠಿಯಲ್ಲಿ ವಾಘ್ ಅಂದರೆ ಹುಲಿ. ವಾಘ್ಮಯ ಅಂದರೆ ಹುಲಿಗಳೇ ತುಂಬಿದ ಕಾಡು?
ಋ) “50% ಕಂಪನಿ ವೇತನ ಹೆಚ್ಚಳ ಕಡಿತ ಇಲ್ಲ" [ಹೊಸದಿಗಂತ. ೫ಮೇ೨೦೨೦. ಗಮನಿಸಿ ಕಳುಹಿಸಿದವರು: ಶ್ರೀಕಾಂತ ಬೆಂಗಳೂರು]. ಈ ತಲೆಬರಹವನ್ನು ಓದುಗರು ಸರಿಯಾಗಿ ಅರ್ಥೈಸುವುದಿರಲಿ, ಬರೆದ ಆ ಪತ್ರಕರ್ತ ಮಹಾಶಯರೂ ಖಂಡಿತ ಸರಿಯಾಗಿ ಅರ್ಥ ಹೇಳಲಾರರು! ಒಂದನೆಯದಾಗಿ ‘ಹೆಚ್ಚಳ’ ಮತ್ತು ‘ಕಡಿತ’ ಪರಸ್ಪರ ವಿರೋಧಪದಗಳಾದ್ದರಿಂದ +1 -1 = 0 ಆದಂತೆ "50% ಕಂಪನಿ ವೇತನ ಇಲ್ಲ" ಎಂದಾಗುತ್ತದೆ. ಅಂದರೆ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಿಗೆ 50% ವೇತನ ಇಲ್ಲ ಎಂದಾಗುತ್ತದೆ. ಸುದ್ದಿವಿವರ ಬೇರೆಯೇ ಇದೆ. 10 ಉದ್ಯಮ ಸಂಸ್ಥೆಗಳ ಪೈಕಿ 5 ಸಂಸ್ಥೆಗಳು ವೇತನ ಹೆಚ್ಚಳ ಸ್ಥಗಿತಗೊಳಿಸಿಲ್ಲವಂತೆ. ಅದಕ್ಕೆ ಈರೀತಿ ಅಸಂಬದ್ಧ ತಲೆಬರಹ! "ಅರ್ಧದಷ್ಟು ಕಂಪನಿಗಳಲ್ಲಿ ವೇತನ ಹೆಚ್ಚಳ ಸ್ಥಗಿತ ಇಲ್ಲ" ಎಂದು ಬರೆದಿದ್ದರೆ ಗೊಂದಲವಿರುತ್ತಿರಲಿಲ್ಲ. ತಲೆಬರಹವಿರುವುದು ಸುದ್ದಿಯ ಸಾರಾಂಶವನ್ನು ನಿಖರವಾಗಿ, ಅಪಾರ್ಥ/ಅನರ್ಥ ಆಗದಂತೆ ತಿಳಿಸುವುದಕ್ಕೆ.
ಎ) "ಚೀನಾ ಕಂಪನಿಗಳಿಗೆ ಕೆಂಪುಹಾಸು" [ವಿಜಯವಾಣಿ. ೬ಮೇ೨೦೨೦. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ರವೀಂದ್ರ ಡಂಬಳ]. ತಲೆಬರಹವನ್ನೋದಿದರೆ ಚೀನಾ ದೇಶದ ಕಂಪನಿಗಳನ್ನು ಭಾರತ ಸ್ವಾಗತಿಸುತ್ತಿದೆಯೇನೋ ಎಂದುಕೊಳ್ಳಬೇಕು. ಆದರೆ ಸುದ್ದಿವಿವರದಲ್ಲಿರುವುದು “ಕೊರೊನಾ ಮಹಾವ್ಯಾಧಿಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯಿಂದಾಗಿ ಚೀನಾ ತೊರೆಯುವ ಕಂಪನಿಗಳನ್ನು ಆಕರ್ಷಿಸಲು ಭಾರತ ಯೋಜನೆಯೊಂದನ್ನು ರೂಪಿಸಿದೆ". ಅಂದರೆ, ಅವು ಚೀನಾ ಕಂಪನಿಗಳಲ್ಲ. ಬೇರೆ ದೇಶಗಳ ಕಂಪನಿಗಳು, ಸದ್ಯಕ್ಕೆ ಚೀನಾದಲ್ಲಿವೆ ಅಷ್ಟೇ.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ದಣಿವು ಸರಿ. ಆಯಾಸ ಎಂಬರ್ಥ. ಇಂಗ್ಲಿಷ್‌ನಲ್ಲಾದರೆ fatigue. ಮಹಾಪ್ರಾಣಾಕ್ಷರ ಬಳಸಿ ಧಣಿವು ಎಂದು ಬರೆದರೆ ತಪ್ಪು. ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಸಿನೆಮಾದಲ್ಲಿ ಸೋನು ನಿಗಮ್ ‘ಸಾಗರದ ಅಲೆಗೂ ಧಣಿವು...’ ಎಂದು ಹಾಡಿದಾಗ ಅವರಿಂದ ಉಚ್ಚಾರ ಸರಿಮಾಡಿಸಬೇಕಿತ್ತು.
ಆ) ಬಾಲಿಶ ಸರಿ. ತಿಳಿವಳಿಕೆಯಿಲ್ಲದ, ದಡ್ಡತನದ, ಅಜಾಗರೂಕತನದ, ಮಕ್ಕಳಾಟಿಕೆಯ, ಹುಡುಗುತನದ ಮುಂತಾದ ಅರ್ಥಗಳು. ಉದಾಹರಣೆಗೆ ರಾಹುಲ್ ಗಾಂಧಿಯ ಹೇಳಿಕೆಗಳು. ಬಾಲೀಶ ಎಂದು ದೀರ್ಘ ಸೇರಿಸಿ ಬರೆಯುವುದು ತಪ್ಪು.
ಇ) ದಟ್ಟಣೆ ಸರಿ. ಒತ್ತೊತ್ತಾಗಿ ಇರುವುದು ಎಂದರ್ಥ. The state of being thick, crowded together ಎಂದು ಕಿಟ್ಟೆಲ್ ಕೋಶದಲ್ಲಿರುವ ಅರ್ಥ. ದಟ್ಟನೆ ಎಂದು ಬರೆಯುವುದು ತರವಲ್ಲ. “ಸಾಸ್ತಾನ ಟೋಲ್ ಗೇಟ್. ಒಂದೇ ಗೇಟ್‌ನಿಂದಾಗಿ ವಾಹನ ದಟ್ಟನೆ ಸಮಸ್ಯೆ" [ಉದಯವಾಣಿ. ೨ಮೇ೨೦೨೦. ಗಮನಿಸಿ ಕಳುಹಿಸಿದವರು ಉಡುಪಿಯಿಂದ ಪ್ರತಿಮಾ ಆಚಾರ್ಯ]. ದಟ್ಟಣೆ ಎಂಬ ಪದ ಮರಾಠಿಯ ‘ದಾಟಣ’ ಅಥವಾ ‘ದಾಟಣೀ’ ಯಿಂದ ಬಂದದ್ದೆಂದು ಕಿಟ್ಟೆಲ್ ಅಭಿಪ್ರಾಯ. ‘ಕಠಿಣ’ವನ್ನು ‘ಕಠಿನ’ ಎಂದು ಬರೆಯಬಹುದಾದರೂ ‘ದಟ್ಟಣೆ’ಯನ್ನು ‘ದಟ್ಟನೆ’ ಎಂದು ಬರೆಯಬಾರದು.
ಈ) ಆದರಾತಿಥ್ಯ ಸರಿ. ಆದರ + ಆತಿಥ್ಯ = ಆದರಾತಿಥ್ಯ. ಸವರ್ಣದೀರ್ಘ ಸಂಧಿ. ಆಧರಾಥಿತ್ಯ ಎಂದು ಎರಡೆರಡು ಅನಾವಶ್ಯಕ ಮಹಾಪ್ರಾಣಗಳನ್ನು ಸೇರಿಸಿದ ರೂಪ ಕಂಡುಬರುವುದಿದೆ. ಅದು ತಪ್ಪು.
ಉ) ಆಂಗಿಕ ಸರಿ. ‘ಅಂಗ’ಕ್ಕೆ ಇಕ (ಸಂಬಂಧಪಟ್ಟ) ಪ್ರತ್ಯಯ ಸೇರಿದಾಗ ಮೊದಲ ಅಕ್ಷರ ದೀರ್ಘವಾಗಿ ‘ಅಂಗಿಕ’ ಆಗುತ್ತದೆ. ಇದನ್ನು ‘ಆಂಗೀಕ’ ಎಂದು ತಪ್ಪಾಗಿ ಬರೆದಿರುವುದು ಪತ್ರಿಕೆಗಳಲ್ಲಿ ಕಂಡುಬರುತ್ತದೆ.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.