ನವದೆಹಲಿ: ಚೀನಾದಲ್ಲಿ ಹುಟ್ಟಿ ಇದೀಗ ಇಡೀ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿರುವ ಕೊರೋನಾ ಭಾರತದಲ್ಲಿಯೂ ರಣಕೇಕೆ ಹಾಕುತ್ತಿದ್ದು, ಈ ವರೆಗೂ ಮಹಾಮಾರಿ ವೈರಸ್'ಗೆ 1,218 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 37,336 ಮಂದಿ ಸೋಂಕಿಗೊಳಗಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
37,336 ಮಂದಿ ಸೋಂಕಿತರ ಪೈಕಿ ಈ ವರೆಗೂ 9,950 ಮಂದಿ ವೈರಸ್'ನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 26,167 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾ ಮಟ್ಟಹಾಕಲು ಈ ಹಿಂದೆ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶದಾದ್ಯಂತ ಲಾಕ್'ಡೌನ್'ಗೆ ಆದೇಶ ನೀಡಿತ್ತು. ಲಾಕ್'ಡೌನ್ ನಡುವಲ್ಲೂ ಹೆಮ್ಮಾರಿ ವೈರಸ್ ಆರ್ಭಟ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮತ್ತೆ 19 ದಿನಗಳಿಗೆ ಲಾಕ್'ಡೌನ್ ವಿಸ್ತರಣೆ ಮಾಡಿತ್ತು. ಈಗಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತೆ 14 ದಿನಗಳ ಕಾಲ ಲಾಕ್'ಡೌನ್ ವಿಸ್ತರಣೆ ಮಾಡಿದೆ. ಆದರೆ, ಕೊರೋನಾ ವಿರುದ್ದದ ಹೊರಾಟದ ಜೊತೆಗೇ ಆರ್ಥಿಕ ಚಟುವಟಿಕೆಗಳನ್ನೂ ಹಂತಹಂತವಾಗಿ ಆರಂಭಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಹೆಚ್ಚಿನ ವಿನಾಯಿತಿಗಳನ್ನು ಪ್ರಕಟಿಸಿದೆ. ಇದಕ್ಕಾಗಿ ದೇಶದಲ್ಲಿರುವ 700ಕ್ಕೂ ಹೆಚ್ಚು ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ಎಂದು ವಿಂಗಡಣೆ ಮಾಡಿದೆ. ಕೆಂಪು ವಲಯದಲ್ಲಿ ಕಟ್ಟುನಿಟ್ಟಾಗಿ ಲಾಕ್'ಡೌನ್ ಜಾರಿ ಮಾಡುವುದರ ಜೊತೆಗೆ, ಟೌನ್ ಶಿಪ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಕ್ಕೆ ಅನುಮತಿ ನೀಡಿದೆ. ಕಿತ್ತಳೆ ವಲಯದಲ್ಲಿ ಕ್ಯಾಬ್, ಬೈಕ್ ಸಂಚಾರಕ್ಕೆ ಷರತ್ತಿನ ಅನುಮತಿ ಕಲ್ಪಿಸಿದೆ. ಹಸಿರು ವಲಯದಲ್ಲಿ ಹೆಚ್ಚಿನ ವಿನಾಯಿತಿ ನೀಡಲಾಗಿದ್ದು, ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೂಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆದರೆ, ಬಸ್, ರೈಲು, ವಿಮಾನ, ಮೆಟ್ರೋ, ಶಾಲೆ-ಕಾಲೇಜು, ಸಾಮಾಜಿ-ಧಾರ್ಮಿಕ ರಾಜಕೀಯ ಸಭೆ ಸಮಾರಂಭಗಳಿಗೆ ದೇಶದಾದ್ಯಂತ ನಿಬರ್ಂಧ ಮುಂದುವರಿಸಲಾಗಿದೆ. ಅತ್ಯಗತ್ಯವಲ್ಲದ ಎಲ್ಲಾ ಸೇವೆಗಲನ್ನು ರಾತ್ರಿ 7 ರಿಂದ ಮುಂಜಾನೆ 7 ಗಂಟೆಯವರೆಗೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. 65 ವರ್ಷ ಮೇಲ್ಪಟ್ಟವರು, ಮಕ್ಕಳು, ಗರ್ಭಿಣಿಯರು ಮನೆಯೊಲಗೇ ಕಾಲ ಕಳೆಯಬೇಕು ಎಂದು ಸರ್ಕಾರ ಹೇಳಿದೆ.