ನವದೆಹಲಿ: ದೇಶದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ 39,980ಕ್ಕೆ ಏರಿಕೆಯಾಗಿದೆ. ಅಲ್ಲದೆ ಮಹಾಮಾರಿ ವೈರಸ್'ಗೆ 1,301 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.
ಶನಿವಾರ ಒಂದೇ ದಿನ ದೇಶದಲ್ಲಿ 2067 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 71 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ದೇಶದಲ್ಲಿ 10,017 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಶೇ.26.52ಕ್ಕೆ ಏರಿಕೆಯಾಗಿದೆ. ಇದೂವರೆಗೆ 10 ಲಕ್ಷ ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ನಡುವೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಮಹಾರಾಷ್ಟ್ರದಲ್ಲಿ ನಿನ್ನೆ 790 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,296ಕ್ಕೆ ತಲುಪಿದೆ. ಜೊತೆಗೆ ರಾಜ್ಯದಲ್ಲಿ 36 ಜನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 521ಕ್ಕೆ ತಲುಪಿದೆ. ಇನ್ನು ಗುಜರಾತ್ ನಲ್ಲಿ 353 ಹೊಸ ಪ್ರಕರಣಗಳೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 5054ಕ್ಕೆ ತಲುಪಿದೆ. ಜೊತೆಗೆ ಒಂದೇ ದಿನ 26 ಜನ ಸಾವನ್ನಪ್ಪುವುದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 262ಕ್ಕೆ ತಲುಪಿದೆ. ಇನ್ನು ತಮಿಳುನಾಡಿನಲ್ಲಿ ಶನಿವಾರ 231 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.