ಸಿಂಗಾಪುರ: ಸಿಂಗಾಪುರದಲ್ಲಿ ಅಲ್ಪ ಲಕ್ಷಣಗಳೊಂದಿಗೆ ಸುಮಾರು 4800 ಭಾರತೀಯರಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮಾಹಿತಿ ನೀಡಿದ್ದು, ಅಲ್ಪ ಸೋಂಕಿನ ಲಕ್ಷಣಗಳೊಂದಿಗೆ ಸುಮಾರು 4800 ಭಾರತೀಯರಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದಿದೆ. ಸೋಂಕು ಪೀಡಿತರಲ್ಲಿ ಹೆಚ್ಚು ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಸುಧಾರಣೆ ಕಾಣುತ್ತಿದೆ. ಸೋಂಕಿತರಲ್ಲಿ ಬಹುತೇಕ ಮಂದಿಯು ಭಾರತೀಯ ರಾಷ್ಟ್ರೀಯತೆ ಹೊಂದಿದ್ದಾರೆ. ಅಂತೆಯೇ ಕೆಲವರು ಸಿಂಗಪುರದ ಖಾಯಂ ನಿವಾಸಿಗಳಾಗಿದ್ದಾರೆ ಎಂದೂ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ತಿಳಿಸಿದ್ದಾರೆ.
ಕೊರೋನಾ ಸೋಂಕು ಪೀಡಿತರಲ್ಲಿ ಹೆಚ್ಚು ಜನರು ವಿದೇಶಿ ಕಾರ್ಮಿಕರ ವಸತಿ ನಿಲಯಗಳಲ್ಲಿ ವಾಸವಿದ್ದರು. ವಿದೇಶಿ ಕಾರ್ಮಿಕರ ವಸತಿ ನಿಲಯಗಳನ್ನು ಸಿಂಗಾಪುರದಲ್ಲಿ ಕೊರೊನಾ ಹರಡುವಿಕೆಯ ಮೂಲ ಜಾಗಗಳೆಂದು ಗುರುತಿಸಲಾಗಿದೆ. ಸಿಂಗಾಪುರದಲ್ಲಿ ಈ ವರೆಗೂ ಸುಮಾರು 18,205 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ.
ಕೊರೋನಾ ವೈರಸ್ ಸೋಂಕು ಪ್ರಸರಣದ ಹಿನ್ನಲೆಯಲ್ಲಿ 3500ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಲು ತಮ್ಮ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ಅದು ಸಾಧ್ಯವಾಗಿಲ್ಲ. ಸಿಂಗಾಪುರದಲ್ಲಿರುವ ಭಾರತೀಯರ ಪೈಕಿ ಶೇ.90 ಮಂದಿ ಭಾರತೀಯರಿಗೆ ಸೋಂಕು ತಗುಲಿದ್ದು, ಬಹುತೇಕರು ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ.