ದೆಹಲಿ:ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆಗೆ ಸಹಾಯವಾಗುವ ರೀತಿಯಲ್ಲಿ ಗೂಗಲ್ ಸಂಸ್ಥೆ ಉಚಿತ ಸೇವೆಯನ್ನು ಘೋಷಿಸಿದೆ.
ಉದ್ಯಮ ಕ್ಷೇತ್ರಗಳಲ್ಲಿ ಮುಖ್ಯವಾಗಿ ಬಳಕೆಯಾಗುವ ವಿಡಿಯೋ ಮೀಟಿಂಗ್ ವ್ಯವಸ್ಥೆಯನ್ನು ಎಲ್ಲರಿಗೂ ಉಚಿತವಾಗಿ ವಿಸ್ತರಿಸುವುದಾಗಿ ಗೂಗಲ್ ಘೋಷಿಸಿದ್ದು, ವಿಡಿಯೋ ಕಾನ್ಫರೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಚೀನಾ ಮೂಲದ ಆಪ್ ಜೂಮ್ ಗೆ ಪೈಪೆÇೀಟಿ ನೀಡಲು ಮುಂದಾಗಿದೆ. ಉದ್ಯಮ ಕ್ಷೇತ್ರದ ಆನ್ ಲೈನ್ ಸಭೆಗಳನ್ನು ನಡೆಸುವುದಕ್ಕಾಗಿಯೇ ಗೂಗಲ್ ಸಂಸ್ಥೆ ಈ ವರೆಗೂ ಪ್ರೀಮಿಯಮ್ ಜಿ-ಸೂಟ್ ಚಂದಾದಾರರಿಗೆ ಗೂಗಲ್ ಮೀಟ್ ಸೌಲಭ್ಯ ಒದಗಿಸುತ್ತಿತ್ತು. ಈಗ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಎಲ್ಲರಿಗೂ ಗೂಗಲ್ ಮೀಟ್ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಗೂಗಲ್ ಸಂಸ್ಥೆಯ ಜಿ-ಸೂಟ್ ನ ಉಪಾಧ್ಯಕ್ಷ ಜೇವಿಯರ್ ಸೊಲ್ಟಾರೊ ಹೇಳಿದ್ದಾರೆ.
ಜೂಮ್ ಆಪ್ ನಲ್ಲಿ ಹಲವಾರು ಸುರಕ್ಷತಾ ಲೋಪಗಳು ಇತ್ತೀಚಿನ ದಿನಗಳಲ್ಲಿ ಪತ್ತೆಯಾಗಿದ್ದು, ಡಾಟಾ ಹ್ಯಾಕಿಂಗ್, ಹಾಗೂ ಜೂಮ್ ಬಾಂಬಿಂಗ್ (ಸಭೆ ನಡೆಯುತ್ತಿರಬೇಕಾದರೆ ಅದನ್ನು ಹ್ಯಾಕರ್ ಗಳು ತಮ್ಮ ಹತೋಟಿಗೆ ತೆಗೆದುಕೊಂಡು ಅಸಂಬದ್ಧ ಅಂಶಗಳನ್ನು ಸೇರಿಸುವುದು) ಆರೋಪಗಳು ಕೇಳಿಬಂದಿದ್ದವು.
ಈಗ ಜಿ-ಮೀಟ್ ನ ಸುರಕ್ಷತೆ ಬಗ್ಗೆ ಮಾತನಾಡಿರುವ ಗೂಗಲ್ ಜಿ-ಮೀಟ್ ನ್ನು ಸುರಕ್ಷಿತ, ವಿಶ್ವಾಸಾರ್ಹ ಆಪ್ ನ್ನಾಗಿ ತಯಾರಿಸಲು ಗೂಗಲ್ ಹಲವು ವರ್ಷಗಳ ಶ್ರಮ ವಹಿಸಿದೆ ಎಂದು ಹೇಳಿದೆ.