ಕಾಸರಗೋಡು: ಕೊರೊನಾ ವೈರಸ್ ಬಾಧೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಅಡ್ಕಸ್ಥಳವರೆಗಿನ ಕಾಮಗಾರಿ ಪುನಾರಂಭಗೊಂಡಿದೆ. ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗೆ ಹಾಗೂ ಚೆರ್ಕಳದಿಂದ ಉಕ್ಕಿನಡ್ಕ ವೆಗೆ ಎರಡು ಪ್ರತ್ಯೇಕ ಟೆಂಡರ್ ಮೂಲಕ ಕೆಲಸ ನಡೆಯುತ್ತಿದೆ.
ಪೆರ್ಲ ಪೇಟೆಯಲ್ಲಿ ರಸ್ತೆ ಅಗಲಗೊಳಿಸಿ ಕಾಂಕ್ರೀಟ್ ಮಿಕ್ಸಿಂಗ್ ಅಳವಡಿಸುವ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪೇಟೆ ಸಂಪೂರ್ಣ ಧೂಳುಮಯವಾಗಿದೆ. ಪ್ರಸಕ್ತ ಕಾಂಕ್ರೀಟ್ ಮಿಕ್ಸಿಂಗ್ ಅಳವಡಿಸುವ ಕಾಮಗಾರಿ ಆರಂಭಗೊಂಡಿದ್ದು, ಆರೋಗ್ಯ ಇಲಾಖೆ ಮಾನದಂಡ ಪಾಲಿಸಿಕೊಂಡು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಬಹುತೇಕ ಕಾಮಗಾರಿ ಯಾಂತ್ರಿಕವಾಗಿ ನಡೆಯುತ್ತಿರುವುದರಿಂದ ಸಾಮಾಜಿಕ ಅಂತರ ಪಾಲಿಸುವ ಬಗ್ಗೆ ಹೆಚ್ಚಿನ ಸಮಸ್ಯೆಯಾಗುತ್ತಿಲ್ಲ.
ಚೆರ್ಕಳದಿಂದ ಅಡ್ಕಸ್ಥಳ ವರೆಗಿನ 30 ಕಿ.ಮೀ ದೂರದ ರಸ್ತೆಯನ್ನು ಅಗಲಗೊಳಿಸಿ, ಮೆಕ್ಕಡಾಂ ಡಾಂಬರೀಕರಣ ನಡೆಸುವ ನಿಟ್ಟಿನಲ್ಲಿ 67.15ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ 20ಕಿ.ಮೀ ರಸ್ತೆ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ಹತ್ತು ಕಿ.ಮೀ ರಸ್ತೆ ಅಭಿವೃದ್ಧಿಗೆ ಎರಡು ಪ್ರತ್ಯೇಕ ಟೆಂಡರ್ ನಡೆಸಲಾಗಿದ್ದು, ಎರಡೂ ಕೆಲಸಗಳೂ ಏಕ ಕಾಲಕ್ಕೆ ನಡೆಯುತ್ತಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗೆ 39.76ಕೋಟಿ, ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗೆ 27.39ಕೋಟಿ ರೂ. ಮೀಸಲಿರಿಸಲಾಗಿದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಪಊರ್ತಿಗೊಳಿಸುವುದು ಅನುಮಾನವಾಗಿದ್ದು, ಇದಕ್ಕೂ ಮೊದಲು ಮಳೆನೀರು ಹರಿಯಲು ರಸ್ತೆ ಅಂಚಿಗೆ ಚರಂಡಿ ವ್ಯವಸ್ಥೆ ಸಮರ್ಪಕಗೊಳಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.