ಕುಂಬಳೆ: ಲೋಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ತೆರಳಲಾರದೆ ಬಾಕಿಯಾಗಿದ್ದ ಅನ್ಯ ರಾಜ್ಯ ಕಾರ್ಮಿಕರ ತಂಡ ಗಡಿ ದಾಟಿ ತೆರಳಲು ಶ್ರಮಿಸುತ್ತಿರುವುದನ್ನು ಪೋಲೀಸರು ತಡೆಹಿಡಿದ ಘಟನೆ ನಡೆದಿದೆ.
ಕಳೆದ ಎರಡು ತಿಂಗಳ ಹಿಂದೆ ಉತ್ತರಪ್ರದೇಶದಿಂದ ಆಗಮಿಸಿದ್ದ ಕಾರ್ಮಿಕರು ಊರಿಗೆ ತೆರಳಲಾಗದೆ ಉಳಕೊಂಡಿದ್ದರು. ಇವರು ಬದಿಯಡ್ಕ ಸಮೀಪದ ಮುಂಡಿತ್ತಡ್ಕದ ಖಾಸಗೀ ವ್ಯಕ್ತಿಯೋರ್ವರ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು. ಲಾಕ್ ಡೌನ್ ಹೇರಲ್ಪಟ್ಟ ಕಾರಣ ಉದ್ಯೋಗವೂ ಇಲ್ಲದೆ ಸಂಕಷ್ಟದಲ್ಲಿ ಕಳೆಯಬೇಕಾಯಿತು. ಆದರೂ ಕ್ವಾರ್ಟ್‍ರ್ಸ್ ಮಾಲಕನು ಉಚಿತವಾಗಿ ಉಳಕೊಳ್ಳುವ ಕೊಠಡಿಯನ್ನೂ, ಗ್ರಾ.ಪಂ. ಮೂಲಕ ಸಮುದಾಯ ಅಡುಗೆ ಯೋಜನೆಯ ಮೂಲಕ ಆಹಾರ ವ್ಯವಸ್ಥೆಯೂ ಇವರಿಗೆ ವ್ಯವಸ್ಥೆಗೊಳಿಸಲಾಗಿತ್ತು.
ಈ ಮಧ್ಯೆ ಸೋಮವಾರ ಊರಿಗೆ ತೆರಳಲು ತೀರ್ಮಾನಿಸಿ 40 ಮಂದಿಯ ತಂಡ ತಮ್ಮ ಸರಂಜಾಮುಗಳೊಂದಿಗೆ ಪುತ್ತಿಗೆ ದಾರಿಯಾಗಿ ಕಾಲ್ನಡಿಗೆಯಲ್ಲಿ ಅಂಗಡಿಮೊಗರು ಮೂಲಕ ಪೆರ್ಮುದೆ ತಲಪುತ್ತಿರುವಂತೆ ಪೋಲೀಸರು ತಡೆಹಿಡಿದರು. ಬಳಿಕ ಪೋಲೀಸರು ಉತ್ತರಪ್ರದೇಶಕ್ಕೆ ತಲಪಿಸುವ ಬಗ್ಗೆ ಸರ್ಕಾರದ ನಿಯಮಾನುಸಾರ ಅಗತ್ಯದ ಕ್ರಮ ಕೈಗೊಳ್ಳುವ ಭರವಸೆ ನೀಡಿ ಮರಳಿ ತಾವು ಉಳಕೊಂಡಿದ್ದ ಮುಂಡಿತ್ತಡ್ಕಕ್ಕೆ ಕಳಿಸಲು ಸಫಲರಾದರು.