ಟೆಲ್ ಅವೀವ್: ಜಗತ್ತಿನ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಇಸ್ರೇಲ್ ವಿಜ್ಞಾನಿಗಳು ಔಷಧಿ ಕಂಡುಹಿಡಿದಿದ್ದು, ಶೀಘ್ರದಲ್ಲೇ ಮಾರಾಟ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವಾದ್ಯಂತ ವಿಜ್ಞಾನಿಗಳು ಕೊರೋನಾ ವೈರಸ್ ನ ಔಷಧಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟೇ ಯಾಕೆ ಹಲವು ಕಡೆಗಳಲ್ಲಿ ಔಷಧಿಯ ಪರೀಕ್ಷೆಗಳೂ ಕೂಡ ಆರಂಭವಾಗಿದ್ದು, ಕೊವಿಡ್ 19 ಗೆ ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು 100ಕ್ಕೂ ಅಧಿಕ ವ್ಯಾಕ್ಸಿನ್ ಗಳು ಪ್ರಿಕ್ಲಿನಿಕಲ್ ಟ್ರಯಲ್ ನಲ್ಲಿವೆ. ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಪ್ರತಿಯೊಂದು ಲಸಿಕೆಯನ್ನು ಮಾನವರ ಮೇಲೆ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಕೂಡ ಯಾವುದೇ ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕಿಲ್ಲ.
ಈ ನಡುವೆ ಇಸ್ರೇಲ್ ನಿಂದ ಒಂದು ಸಿಹಿ ಸುದ್ದಿ ಬಂದಿದ್ದು, ಇಸ್ರೇಲ್ ವಿಜ್ಞಾನಿಗಳು ಕೊರೋನಾ ವೈರಸ್ ಔಷಧಿ ತಯಾರಿಕಾ ಪ್ರಕ್ರಿಯೆಯಲ್ಲಿ ಮಹತ್ವ ಯಶಸ್ಸು ಸಾಧಿಸಿದ್ದಾರೆ ಎನ್ನಲಾಗಿದೆ. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೋನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ.
ಕೊರೋನಾ ವೈರಸ್ ಅನ್ನು ಆಂಟಿ ಬಾಡಿ ಹೇಗೆ ನಿವಾರಿಸಲಿದೆ ಎಂಬುದರ ಬಗ್ಗೆ ನಫ್ತಾಲಿ ಬೆನೆಟ್ ಮಾಹಿತಿಯನ್ನು ನೀಡಿದ್ದು, 'ಇಸ್ರೇಲ್‍ನ ಐಐಬಿಆರ್ ಇನ್‍ಸ್ಟಿಟ್ಯೂಟ್‍ನಲ್ಲಿ ಲಸಿಕೆ ಅಭಿವೃದ್ಧಿಪಡಿಸುವ ಹಂತ ಈಗ ಪೂರ್ಣಗೊಂಡಿದೆ. ಐಐಬಿಆರ್ ಅಭಿವೃದ್ಧಿ ಪಡಿಸಿರುವ ಪ್ರತಿಕಾಯವು ಕೊರೋನಾ ವೈರಸ್ ಅನ್ನು ಮೊನೊಕ್ಲೋನಲ್ ರೀತಿಯಲ್ಲಿ ಆಕ್ರಮಣ ಮಾಡುತ್ತದೆ ಮತ್ತು ಅನಾರೋಗ್ಯ ಪೀಡಿತ ಜನರ ದೇಹದೊಳಗಿನ ಕೊರೋನಾ ವೈರಸ್ ಅನ್ನು ನಿರ್ಮೂಲನೆ ಅಥವಾ ಕಾರ್ಯ ನಿರ್ವಹಿಸದಂತೆ ತಟಸ್ಥ ಮಾಡುತ್ತದೆ ಎಂದು ಹೇಳಿದ್ದಾರೆ. ಇದರಿಂದ ಈ ಮಾರಕ ವೈರಸ್ ದೇಹದ ಇನ್ನೊಂದು ಭಾಗಕ್ಕೆ ಅಥವಾ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ ಎಂಬುದನ್ನು ನಾನು ನಿಖರವಾಗಿ ಹೇಳಬಲ್ಲೆ. ಸದ್ಯ ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆಗೆ ಈ ಔಷಧಿಯ ಉತ್ಪಾದನೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಬೆನೆಟ್ ಹೇಳಿದ್ದಾರೆ.