ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣ ಇಲ್ಲ. ಅದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 179 ಮಂದಿಗೆ ರೋಗ ಬಾಧಿಸಿದ್ದು, 171 ಮಂದಿ ಗುಣಮುಖ ರಾಗಿದ್ದಾರೆ. 8 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ ಹೊಸ ಪ್ರಕರಣವಿಲ್ಲ : ಕೇರಳ ರಾಜ್ಯದಲ್ಲಿ ಶುಕ್ರವಾರ ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣ ದಾಖಲಾಗಿಲ್ಲ. ಅದೇ ವೇಳೆ ಒಟ್ಟು 9 ಮಂದಿ ಗುಣಮುಖರಾಗಿದ್ದಾರೆ. ಕಳೆದ 55 ದಿನಗಳ ಬಳಿಕ ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕು ಬಾ„ಸದ ದಿನವಾಗಿದ್ದು, ಸಮಾಧಾನ ಪಡುವಂತಾಗಿದೆ. ಶುಕ್ರವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ನಾಲ್ವರು ಗುಣಮುಖರಾಗಿದ್ದಾರೆ. ಎರ್ನಾಕುಳಂನಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಕೇರಳ ರಾಜ್ಯದಲ್ಲಿ ಒಟ್ಟು 392 ಗುಣಮುಖರಾಗಿದ್ದಾರೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 102 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರ್ನಾಕುಳಂ, ಆಲಪ್ಪುಳ, ತೃಶ್ಶೂರು ಮತ್ತು ವಯನಾಡು ಜಿಲ್ಲೆಗಳು ರೋಗ ಮುಕ್ತವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 21,499 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 21067 ಮಂದಿ ಮನೆಗಳಲ್ಲೂ, 432 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶುಕ್ರವಾರ ಶಂಕಿತ 106 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರೋಗ ಲಕ್ಷಣಗಳುಳ್ಳ 27150 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ಲಭ್ಯ 26225 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 80 ಹಾಟ್ ಸ್ಪಾಟ್‍ಗಳಿವೆ.
ಹಾಟ್ ಸ್ಪಾಟ್ :
ಕಾಸರಗೋಡು ಜಿಲ್ಲೆಯಲ್ಲಿ ಕಾಂಞಂಗಾಡ್ ನಗರಸಭೆ, ಉದುಮ ಹಾಗು ಪಳ್ಳಿಕೆರೆ ಗ್ರಾಮ ಪಂಚಾಯತ್‍ಗಳನ್ನು ಹಾಟ್ ಸ್ಪಾಟ್‍ಗಳಿಂದ ಹೊರತುಪಡಿಸಲಾಗಿದೆ. ಎಲ್ಲಾ ರೋಗಿಗಳು ಈ ಮೊದಲೇ ರೋಗ ಮುಕ್ತರಾಗಿದ್ದರೂ ಕಾಂಞಂಗಾಡ್ ನಗರಸಭೆ ಹಾಟ್‍ಸ್ಪಾಟ್ ಯಾದಿಯಲ್ಲಿ ಮುಂದುವರಿಸಲಾಗಿತ್ತು. ಶುಕ್ರವಾರ ಈ ಯಾದಿಯಿಂದ ಹೊರತುಪಡಿಸಲಾಯಿತು. ಪ್ರಸ್ತುತ ಕಾಸರಗೋಡು ನಗರಸಭೆ, ಚೆಂಗಳ, ಚೆಮ್ನಾಡ್, ಮುಳಿಯಾರು, ಮೊಗ್ರಾಲ್ ಪುತ್ತೂರು, ಅಜಾನೂರು, ಉದುಮ ಗ್ರಾಮ ಪಂಚಾಯತ್‍ಗಳು ಹಾಟ್‍ಸ್ಪಾಟ್‍ಗಳಲ್ಲಿವೆ.
ಕಾಸರಗೋಡು ಜಿಲ್ಲೆ ಆರೆಂಜ್ ಝಾನ್ : ಕೇಂದ್ರ ಆರೋಗ್ಯ ಸಚಿವಾಲಯ ಕಾಸರಗೋಡು ಜಿಲ್ಲೆಯನ್ನು ರೆಡ್ ಝೋನ್‍ನಿಂದ ಆರೆಂಜ್ ಝೋನ್‍ಗೆ ಸೇರ್ಪಡೆಗೊಳಿಸಿದೆ. ಕೇರಳದಲ್ಲಿ ಕಣ್ಣೂರು ಮತ್ತು ಕೋಟ್ಟಯಂ ಜಿಲ್ಲೆಗಳು ಮಾತ್ರವೇ ರೆಡ್ ಝೋನ್‍ನಲ್ಲಿವೆ. ರಾಜ್ಯದ 10 ಜಿಲ್ಲೆಗಳು ಆರೆಂಜ್ ಝೋನ್‍ನಲ್ಲೂ, ಎರಡು ಜಿಲ್ಲೆಗಳು ಗ್ರೀನ್ ಝೋನ್‍ನಲ್ಲಿದೆ.
ಕೇಸು ದಾಖಲು : ಲಾಕ್ ಡೌನ್ ಉಲ್ಲಂಘನೆಯ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 24 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 1, ಕುಂಬಳೆ-3, ಕಾಸರಗೋಡು-1, ವಿದ್ಯಾನಗರ-5, ಬೇಡಗ-1, ಮೇಲ್ಪರಂಬ-1, ನೀಲೇಶ್ವರ-2, ಚಂದೇರ-3, ವೆಳ್ಳರಿಕುಂಡು-4, ಚಿಟ್ಟಾರಿಕ್ಕಲ್-3 ಎಂಬಂತೆ ಕೇಸು ದಾಖಲಿಸಲಾಗಿದೆ. ವಿವಿಧ ಠಾಣೆಗಳಲ್ಲಾಗಿ 54 ಮಂದಿಯನ್ನು ಬಂಧಿಸಿದ್ದು, 11 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1987 ಕೇಸುಗಳನ್ನು ದಾಖಲಿಸಲಾಗಿದೆ. 2499 ಮಂದಿಯನ್ನು ಬಂಧಿಸಿದ್ದು, 823 ವಾಹನಗಳನ್ನು ವಶಪಡಿಸಲಾಗಿದೆ.