ನವದೆಹಲಿ: ಕೊರೋನಾವೈರಸ್ ಹರಡುವುದನ್ನು ತಡೆಯಲು ಲಾಕ್‍ಡೌನ್ ಹೇರಲಾಗಿದ್ದು ಇದರಿಂದ ತೊಂದರೆಗೊಳಗಾಗಿರುವ ನಾನಾ ವಲಯಗಳು, ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಎರಡನೇ ಬಾರಿ ಆರ್ಥಿಕ ಉತ್ತೇಜಕ ಪ್ಯಾಕೇಜ್ ರೂಪಿಸುವ ಬಗೆಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಥಿಕ ಸಚಿವಾಲಯಗಳ ಅಧಿಕಾರಿಗಳೊಡನೆ ಸರಣಿ ಸಭೆ ನಡೆಸಿದರು.
ಪ್ರಧಾನಿ ಶಾ ಮತ್ತು ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿದ್ದು ಪ್ರಮುಖ ಆರ್ಥಿಕ ಸಚಿವಾಲಯಗಳಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಎಂಎಸ್‍ಎಂಇ) ಮಂತ್ರಿಗಳೊಂದಿಗೆ ಸಹ ಅಸಭೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ.
ಮಾಸಿಕ ಜಿಎಸ್ಟಿ ಸಂಗ್ರಹ ಅಂಕಿ ಅಂಶಗಳ ಬಿಡುಗಡೆಯನ್ನು ಮುಂದೂಡಿದ ಹಣಕಾಸು ಸಚಿವಾಲಯವು ಆರ್ಥಿಕ ಸ್ಥಿತಿ ಮತ್ತು ಭಾರತದ ಆರ್ಥಿಕತೆಯನ್ನು ಉತ್ತೇಜಿಸಲು ಕೈಗೊಳ್ಳಲು ಯೋಜಿಸಿರುವ ಹಲವಾರು ಉಪಕ್ರಮಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರವಾದ ಪ್ರಸ್ತುತಿಯನ್ನು ನೀಡಿದೆ. ಈಗಾಗಲೇ ನಾಗರಿಕ ವಿಮಾನಯಾನ, ಕಾರ್ಮಿಕ ಮತ್ತು ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯಗಳೊಂದಿಗೆ ಶುಕ್ರವಾರದಂದು ಸಭೆ ನಡೆಸಿದ್ದ ಪ್ರಧಾನಿ ಶೀಯ ಮತ್ತು ಸಾಗರೋತ್ತರ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳ ಪುನರುಜ್ಜೀವನದತ್ತ ಗಮನಹರಿಸುವ ಬಗೆಗೆ ಮಾತನಾಡಿದ್ದರು. ಈ ನಿಟ್ಟಿನಲ್ಲಿ ಗುರುವಾರದಂದು ಅವರು ವಾಣಿಜ್ಯ ಮತ್ತು ಎಂಎಸ್‍ಎಂಇ ಸಚಿವಾಲಯಗಳೊಂದಿಗೆ ವಿವರವಾದ ಚರ್ಚೆಯನ್ನು ನಡೆಸಿದರು. ಆರ್ಥಿಕತೆಯ ತಳಮಟ್ಟದಲ್ಲಿರುವವರು ಎದುರಿಸುತ್ತಿರುವ ಕಷ್ಟಗಳನ್ನು ಕಡಿಮೆ ಮಾಡಲು ಮಾರ್ಚ್ ಅಂತ್ಯದಲ್ಲಿ ಸರ್ಕಾರವು 1.7 ಲಕ್ಷ ಕೋಟಿ ರೂ.ಗಳ ಉತ್ತೇಜಕ ಪ್ಯಾಕೇಜ್ ಘೋಷಿಸಿತ್ತು. ಉಚಿತ ಆಹಾರ ಧಾನ್ಯಗಳು ಮತ್ತು ಬಡವರಿಗೆ ಅಡುಗೆ ಅನಿಲ ಮತ್ತು ಬಡ ಮಹಿಳೆಯರಿಗೆ ಮತ್ತು ವೃದ್ಧರಿಗೆ ನಗದು ಯೋಜನೆಯನ್ನು ಇದು ಒಳಗೊಂಡಿತ್ತು.ಇದೀಗ ಎರಡನೇ ಹಂತದ ಪರಿಹಾರ ಕ್ರಮಗಳನ್ನು ಮತ್ತು ಉತ್ತೇಜಕ ಪ್ಯಾಕೇಜ್ ಅನ್ನು ಶೀಘ್ರದಲ್ಲೇ ಘೋಷಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 25 ರಿಂದ ಸರ್ಕಾರವು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‍ಡೌನ್ ಹೇರಿದ್ದು ಮೇ 17ರವರೆಗೆ ಅದನ್ನು ವಿಸ್ತರಿಸಲಾಗಿದೆ. ಈ ಲಾಕ್‍ಡೌನ್ ದೇಶಾದ್ಯಂತ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದು ವಾಯು ಮತ್ತು ರೈಲು ಪ್ರಯಾಣವನ್ನು ಸತ ತಟಸ್ಥವಾಗಿಸಿದೆ. ಆದರೆ ಇದೀಗ ಮೇ 4 ರಿಂದ, ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೈಗಾರಿಕೆಗಳನ್ನು ತೆರೆಯುವುದು ಸೇರಿದಂತೆ ಕೆಲವು ನಿಬರ್ಂಧಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು ಅಂತಹಾ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರುವ ನಿರೀಕ್ಷೆ ಇದೆ.