ನವದೆಹಲಿ(ಮೇ.06): ನಿವೃತ್ತಿಯಾದ ನ್ಯಾಯಮೂರ್ತಿಗಳಿಗೆ ಸಹುದ್ಯೋಗಿ ನ್ಯಾಯಮೂರ್ತಿಗಳು, ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳು ಕೂಡಿ, ಸಮಾರಂಭ ಮಾಡಿ ಅದ್ಧೂರಿಯಾಗಿ ಮತ್ತು ಆತ್ಮೀಯವಾಗಿ ಬೀಳ್ಕೊಡುವುದು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿರುವ ಸತ್ಸಸಂಪ್ರದಾಯ. ಆದರೆ, ನಿನ್ನೆ ನಿವೃತ್ತಿಯಾದ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ಬೀಳ್ಕೊಡುಗೆ ಸಮಾರಂಭ ಭಿನ್ನವಾಗಿತ್ತು.
ಕೊರೋನಾ ಬಂದು ಇಡೀ ದೇಶವೇ ದಿಕ್ಕೆಟ್ಟಂತಾಗಿದೆ. ಎಲ್ಲವೂ ಬದಲಾಗಿದೆ. ಎಲ್ಲಾ ಸಭೆ-ಸಮಾರಂಭಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿವೆ. ಅದೇ ರೀತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಿವೃತ್ತರಾದ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಎಂದಿನಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಹಿಸಿದ್ದರು. ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ವಿದಾಯ ತಿಳಿಸಲಾಯಿತು. ಸಾಮಾನ್ಯವಾಗಿ ನಿವೃತ್ತ ನ್ಯಾಯಾಧೀಶರಿಗಾಗಿ ಸುಪ್ರೀಂ ಕೋರ್ಟ್‍ನ ಹುಲ್ಲುಹಾಸಿನ ಮೇಲೆ ವಿದಾಯ ಸಮಾರಂಭವನ್ನು ಆಯೋಜಿಸುತ್ತದೆ. ಆದರೆ ಈ ಬಾರಿ ಲಾಕ್‍ಡೌನ್ ಕಾರಣ ಕಾರ್ಯಕ್ರಮ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದೆ.
ಕಾರ್ಯಕ್ರಮದಲ್ಲಿ ನಿವೃತ್ತರಾದ ನ್ಯಾಯಮೂರ್ತಿಗಳು ಹಾಗೂ ಅವರ ಬಗ್ಗೆ ಹಾಲಿ ನ್ಯಾಯಮೂರ್ತಿಗಳು ಮಾತನಾಡುವುದು ಸಾಮಾನ್ಯವಾದ ಸಂಗತಿ. ಅದೇ ರೀತಿ ಇವತ್ತಿನ ಬೀಳ್ಕೊಡುಗೆ ಸಮಾರಂಭದಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ನ್ಯಾಯಮೂರ್ತಿ ದೀಪಕ್ ಗುಪ್ತಾ - ಎಎಪಿ ಭಿನ್ನಾಭಿಪ್ರಾಯದ ಹಕ್ಕಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ ಮೊದಲ ನ್ಯಾಯಾಧೀಶರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ದೀಪಕ್ ಗುಪ್ತಾ ಶಾಂತಿಯುತ ಪ್ರದರ್ಶನಕ್ಕೆ ನಾಗರಿಕನಿಗೆ ಹಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಎಂದಿಗೂ ಮರೆಯಲಾಗುವುದಿಲ್ಲ. ಇದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಧೈರ್ಯಶಾಲಿ ಹೇಳಿಕೆಯಾಗಿದೆ ಎಂದರು.
ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ಮಾತನಾಡಿ ಇಂತಹ ಸಾಂಕ್ರಾಮಿಕ ಸಮಯದಲ್ಲಿ ನ್ಯಾಯಾಲಯವು ಅತ್ಯಂತ ವಂಚಿತ ವರ್ಗದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು. ನ್ಯಾಯಾಧೀಶರಾದವರು ಆಸ್ಟ್ರಿಚ್ ಪಕ್ಷಿಯಂತೆ ತಲೆಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಧೀಶರು ನ್ಯಾಯಪೀಠದಲ್ಲಿ ಆಸೀನರಾಗಿದ್ದಾಗ, ಅವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮರೆತುಬಿಡಬೇಕು. ನ್ಯಾಯಾಲಯದ ಕೋಣೆಯಲ್ಲಿ ನ್ಯಾಯದ ಏಕೈಕ ಮಾನದಂಡವೆಂದರೆ ಅದು ನಮ್ಮ ಸಂವಿಧಾನ. ಈ ಸಂವಿಧಾನವು ಗೀತಾ, ಕುರಾನ್, ಬೈಬಲ್, ಗುರು ಗ್ರಂಥ ಸಾಹಿಬ್ ಅಥವಾ ಬೇರೆ ಯಾವುದೇ ಧಾರ್ಮಿಕ ಪುಸ್ತಕಕ್ಕಿಂತಲೂ ಮಿಗಿಲಾದುದಾಗಿದೆ ಎಂದು ಹೇಳಿದರು.