ಕಾಸರಗೋಡು: ಕೊರೋನಾ ನಿಯಂತ್ರಣ ಅವಧಿಯಲ್ಲಿ ಯಾರೂ ಮಾನಸಿಕವಾಗಿ ಬಳಲಬೇಕಿಲ್ಲ, ನಿಮ್ಮ ಜತೆ ಕಾಸರಗೋಡು ಜಿಲ್ಲಾ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗ ಸಿಬ್ಬಂದಿ ಇರಲಿದ್ದಾರೆ. ಕರೊನಾ ಪ್ರತಿರೋಧ ಚಟುವಟಿಕೆಗಳಲ್ಲಿ ಅಹೋರಾತ್ರಿ ದುಡಿಯುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಜನತೆಯ ದೈಹಿಕ ಸಮಸ್ಯೆಗಳ ಪರಿಹಾರದ ಜತೆಗೆ ಮಾನಸಿಕ ಒತ್ತಡಗಳ ಪರಿಹಾರಕ್ಕೂ ಆದ್ಯತೆ ನೀಡಲಾಗುತ್ತಿದೆ.
ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ನೇತೃತ್ವದಲ್ಲಿ ನಡೆಯುವ ಈ ಚಟುವಟಿಕೆಗಳಿಗೆ ಮಾನಸಿಕ ರೋಗಗಳ ತಜ್ಞ ಡಾ.ಸನ್ನಿಮ್ಯಾಥ್ಯೂ ಚುಕ್ಕಾಣಿ ಹಿಡಿದಿದ್ದಾರೆ. ಫೆ.15ರಿಂದ ಕಾಸರಗೋಡು ಜಿಲ್ಲಾ ಕರೊನಾ ನಿಯಂತ್ರಣ ಕೊಠಡಿಯಲ್ಲಿ ಅವರ ಸೇವೆ ನಡೆದುಬರುತ್ತಿದೆ. ಕೊರೋನಾ ರೋಗದ ಹರಡುವಿಕೆ, ಆರ್ಥಿಕ ಮುಗ್ಗಟ್ಟು, ಮನೆಮಂದಿಯಿಂದ ಬೇರ್ಪಟ್ಟು ನಿಗಾ ವಾರ್ಡ್ ನಲ್ಲಿ ದಾಖಲಾದವರು, ಹಿರಿಯ ಪ್ರಜೆಗಳು, ಏಕಾಂಗಿಯಾಗಿ ಬದುಕುತ್ತಿರುವವರು ಸಹಿತ ವಿವಿಧ ವಿಚಾರಗಳಲ್ಲಿ ಸಾರ್ವಜನಿಕರು ಕಂಗೆಡುತ್ತಿದ್ದಾರೆ. ಇದರ ಪರಿಣಾಮ ಕೌಟುಂಬಿಕ ಬದುಕಿನ ಮೇಲೂ ಇದು ಅಡ್ಡಪರಿಣಾಮಬೀರುತ್ತಿದೆ. ಈ ಸಮಸ್ಯೆಗಳನ್ನುಕೌನ್ಸೆಲಿಂಗ್ ಮೂಲಕ ಪರಿಹರಿಸುವ ಹಾಗೂ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಗಳು ಈ ವೇಳೆ ನಡೆದುಬರುತ್ತಿದೆ. ನಿಯಂತ್ರಣ ಕೊಠಡಿಗೆ ಕರೆಮಾಡುವ ಮೂಲಕ ಜನ ಕೌನ್ಸೆಲಿಂಗ್ ಪಡೆಯಬಹುದಾಗಿದೆ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.