ಕಾಸರಗೋಡು: ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಕೇರಳೀಯರನ್ನು ಸ್ವಾಗತಿಸಲು ತಲಪ್ಪಾಡಿಯಲ್ಲಿ ಆರಂಭಿಸಿರುವ ಹೆಲ್ಪ್ ಡೆಸ್ಕ್‍ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರ ವಿರುದ್ಧ ಕೇರಳ ಸರ್ಕಾರ ಸೇಡುತೀರಿಸುವ ಯತ್ನ ನಡೆಸುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಸ್ಯಾಲರಿ ಚ್ಯಾಲೆಂಜ್ ವಿರುದ್ಧ ಧ್ವನಿಯೆತ್ತಿದ ಶಿಕ್ಷಕರ ವಿರುದ್ಧ ಸರ್ಕಾರ ಪ್ರತೀಕಾರ ಧೋರಣೆ ತಳೆಯುತ್ತಿದೆ. ಅವರಿಗೆ ಸೂಕ್ತ ಮಾಸ್ಕ್, ಕೈಗವಚ ವಿತರಿಸುವಲ್ಲೂ ಲೋಪವೆಸಗಿದೆ. ಅಲ್ಲದೆ ಸಕಾಲಕ್ಕೆ ಆಹಾರ ಒದಗಿಸುವಲ್ಲೂ ಸರ್ಕಾರ ವಿಫಲವಾಗಿರುವುದಾಗಿ ಅವರು ಆರೋಪಿಸಿದರು. ಅಗತ್ಯಕ್ಕಿಂತ ಮೂರುಪಟ್ಟು ಹೆಚ್ಚು ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಅವರ ಸುರಕ್ಷಾ ವ್ಯವಸ್ಥೆಯಲ್ಲೂ ಸರ್ಕಾರ ಲೋಪವೆಸಗುತ್ತಿದೆ. ಮಹಿಳೆಯರ ಸಹಿತ ಹಲವು ಮಂದಿ ಕರ್ತವ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಸೂಕ್ತ ಶೌಚಗೃಹದ ವ್ಯವಸ್ಥೆಯನ್ನೂ ಮಾಡಲಾಗಿಲ್ಲ. ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಚಹಾಪಾನೀಯ ಸಹಿತ ಆಹಾರ ವ್ಯವಸ್ಥೆಯನ್ನೂ ಪೂರೈಸಲಾಗುತ್ತಿಲ್ಲ. ಇವರಿಗೆ ಆಹಾರ ಒದಗಿಸಲು ಕೆಲವೊಂದು ಸಂಘ ಸಂಸ್ಥೆಗಳು ಮುಂದೆಬಂದರೂ, ಇದಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಊರಿಗೆ ಆಗಮಿಸುವ ಕೇರಳೀಯರಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಒದಗಿಸುವಂತೆಯೂ ಸರ್ಕಾರವನ್ನು ಆಗ್ರಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವಕೀಲ ಕೆ.ಶ್ರೀಕಾಂತ್, ಮುಖಂಡರಾದ ಪಿ.ಸುರೇಶ್‍ಕುಮಾರ್ ಶೆಟ್ಟಿ, ಪಿ.ಮಣಿಕಂಠ ರೈ ಮುಂತಾದವರು ತಲಪ್ಪಾಡಿಯ ಹೆಲ್ಪ್‍ಡೆಸ್ಕ್ ಕೇಂದ್ರಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು.