ಕಾಸರಗೋಡು: ಜಿಲ್ಲೆಯಲ್ಲಿ ಸತತ ಏಳನೇ ದಿನವಾದ ಗುರುವಾರ ಕೂಡಾ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಇದೇ ವೇಳೆ ಇಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಒಬ್ಬರು ಗುಣಮುಖರಾಗಲು ಬಾಕಿ ಇದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಚೆಂಗಳ ಪಂಚಾಯತ್(ವಾರ್ಡ್ ನಂ.17 ಮತ್ತು 18), ಚೆಮ್ನಾಡ್ ಪಂಚಾಯತ್(ವಾರ್ಡ್ ನಂ.22) ಮಾತ್ರವೇ ಹಾಟ್‍ಸ್ಪಾಟ್ ಯಾದಿಯಲ್ಲಿವೆ.
ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಇಬ್ಬರು ಬಿಡುಗಡೆಗೊಂಡವರು. ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿ 29 ವರ್ಷದ ಯುವಕ, ಚೆಂಗಳ ಗ್ರಾಮ ಪಂಚಾಯತ್‍ನ 38 ವರ್ಷದ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು. ಈಗ ಒಬ್ಬರು ಮಾತ್ರ ಬಾಕಿಯಿದ್ದು, ಅವರು ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 178 ಮಂದಿ ಸೋಂಕು ಖಚಿತಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು.
ಕೇರಳದಲ್ಲಿ ಹೊಸ ಪ್ರಕರಣ ಇಲ್ಲ :
ಕೇರಳದಲ್ಲಿ ಸತತ ಎರಡನೇ ದಿನವಾದ ಗುರುವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಇದೇ ಸಂದರ್ಭದಲ್ಲಿ ಐದು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೇವಲ 25 ಮಂದಿ ಮಾತ್ರವೇ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈ ವರೆಗೆ 502 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, 474 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. ಗುರುವಾರ ಕಣ್ಣೂರು ಜಿಲ್ಲೆಯಲ್ಲಿ ಮೂವರು ಹಾಗು ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 16693 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 16383 ಮಂದಿ ಮನೆಗಳಲ್ಲೂ, 310 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 35171 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 34519 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ.
ರಾಜ್ಯದಲ್ಲಿ ಗುರುತಿಸಿದ್ದ 89 ಹಾಟ್‍ಸ್ಪಾಟ್‍ಗಳ ಪೈಕಿ 56 ಹಾಟ್‍ಸ್ಪಾಟ್‍ಗಳನ್ನು ಹೊರತುಪಡಿಸಲಾಗಿದೆ. ಇದೀಗ ಒಟ್ಟು ಹಾಟ್‍ಸ್ಪಾಟ್‍ಗಳು ಕೇವಲ 33.
15 ಕೇಸು ದಾಖಲು : ಲಾಕ್ ಡೌನ್ ಉಲ್ಲಂಘನೆ ಆರೋಪದಲ್ಲಿ 15 ಕೇಸುಗಳನ್ನು ದಾಖಲಿಸಲಾಗಿದೆ. ಕುಂಬಳೆ ಠಾಣೆಯಲ್ಲಿ 1, ವಿದ್ಯಾನಗರ-3, ಕಾಸರಗೋಡು-1, ಮೇಲ್ಪರಂಬ-2, ಅಂಬಲತ್ತರ-1, ನೀಲೇಶ್ವರ-1, ಚಂದೇರ-2, ವೆಳ್ಳರಿಕುಂಡು-2, ಚಿಟ್ಟಾರಿಕ್ಕಲ್-1, ರಾಜಪುರಂ-1 ಎಂಬಂತೆ ಕೇಸು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂ„ಸಿ 38 ಮಂದಿಯನ್ನು ಬಂಧಿಸಲಾಗಿದೆ. 6 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2072 ಕೇಸುಗಳನ್ನು ದಾಖಲಿಸಲಾಗಿದ್ದು, 2671 ಮಂದಿಯನ್ನು ಬಂಧಿಸಲಾಗಿದೆ. 863 ವಾಹನಗಳನ್ನು ವಶಪಡಿಸಲಾಗಿದೆ.