ನವದೆಹಲಿ: ಹಂದ್ವಾರ ಕಾರ್ಯಾಚರಣೆಯು ನಾಗರೀಕ ಜೀವ ರಕ್ಷಿಸುವಲ್ಲಿ ಸೇನಾಪಡೆಗಳಲ್ಲಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾನುವಾರ ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆ ಹಂದ್ವಾರದಲ್ಲಿ ಉಗ್ರರು ನಾಗರೀಕ ಪ್ರದೇಶವೊಂದರ ಮನೆಯಲ್ಲಿ ಅಡಗಿ ಕುಳಿತು ಜನರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದರು. ಈ ವೇಳೆ ಸೇನೆ ನಡೆಸಿದ ಕಾರ್ಯಾಚರಣೆ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ ಅವರು, ಜನರ ಜೀವ ರಕ್ಷಿಸುವಲ್ಲಿ ಸೇನೆ ಎಷ್ಟರ ಮಟ್ಟಿಗೆ ಬದ್ಧತೆಯನ್ನು ಹೊಂದಿದೆ ಎಂಬುದನ್ನು ಈ ಕಾರ್ಯಾಚರಣೆ ತೋರಿಸುತ್ತದೆ. ಒತ್ತೆಯಾಳಾಗಿದ್ದ ನಾಗರೀಕರ ರಕ್ಷಿಸಲು ತೆರಳಿದ್ದ ಭದ್ರತಾಪಡೆಗಳ ಮುಂದಾಳತ್ವನ್ನು ಕಮಾಂಡ್ ಆಫೀಸರ್ ಆಶುತೋಷ್ ಶರ್ಮಾ ವಹಿಸಿದ್ದರು. ತಮ್ಮ ಪ್ರಾಣ ರಕ್ಷಣೆಗೂ ಮುನ್ನ ಸೇವೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಹುತಾತ್ಮ ಯೋಧರ ವೀರತ್ವಕ್ಕೆ ಇಡೀ ದೇಶ ಹೆಮ್ಮೆ ಪಡುತ್ತಿದೆ. ಉಗ್ರರ ಹುಟ್ಟಡಗಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ವೀರ ಯೋಧರಿಗೆ ಗೌರವ ಸಲ್ಲಿಸುತ್ತೇವೆ. ಅವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇವೆಂದು ತಿಳಿಸಿದ್ದಾರೆ.