ಕಾಸರಗೋಡು: ಕೋವಿಡ್ 19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ತಿಳಿಸಿದರು.
ಲಾಕ್ ಡೌನ್ ಮೇ 17 ವರೆಗೆ ಮುಂದುವರಿಸಲಾಗಿದ್ದು, ಅನೇಕ ವಿನಾಯಿತಿ ಜಾರಿಗೊಳಿಸಲಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಗಳಿಂದ ಹೊರಗಿಳಿಯುತ್ತಿದ್ದು, ಸರಕಾರದ ಕಟ್ಟುನಿಟ್ಟುಗಳನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಆರೆಂಜ್ ಝೋನ್ ಪ್ರಕಾರದ ಲಾಕ್ ಡೌನ್ ಮತ್ತು 144 ಸಿ.ಆರ್.ಪಿ.ಸಿ. ಪ್ರಕಾರದ ನಿಷೇದಾಜ್ಞೆ ಜಾರಿಯಲ್ಲಿದೆ. ಮನೆಗಳಿಂದ ಅನಿವಾರ್ವಾಗಿ ಹೊರಗಿಳಿಯಬೇಕಾದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ತೀರ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಸಾರ್ವಜನಿಕರು ಬೇರಾವ ಕಾರಣಗಳಿಗೂ ಮನೆಗಳಿಂದ ಹೊರಗಿಳಿಯಕೂಡದು. ಸಾಮಾಜಿಕ ಅಂತರ ಪಾಲಿಸಿ ಸಂಚಾರ ನಡೆಸಬೇಕು. ತುರ್ತು ಚಿಕಿತ್ಸೆ ಪ್ರಕರಣಗಳಲ್ಲದೆ ಬೇರೆ ವಿಚಾರಗಳಿಗೆ ಆಟೋರಿಕ್ಷಾ ಸಂಚಾರಕ್ಕೆ ಅನುಮತಿಯಿಲ್ಲ. 65 ವರ್ಷ ಪ್ರಾಯಕ್ಕಿಂತ ಹೆಚ್ಚಿನ ವಯೋಮಾನದವರ ಮತ್ತು 10 ವರ್ಷ ಕ್ಕಿಂತ ಕಡಿಮೆ ವಯೋಮಾನಕ್ಕಿಂತ ಕೆಳಗಿನ ಮಕ್ಕಳ ಚಿಕಿತ್ಸೆಗಲ್ಲದೆ ಸಂಚಾರ ನಡೆಸುವುದು, ಸಾರ್ವಜನಿಕ ಪ್ರದೇಶಗಳಿಗೆ ಆಗಮಿಸುವುದನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. 5 ಸೀಟುಗಳಿರುವ ಕಾರುಗಳಲ್ಲಿ ಮೂವರು, 7 ಸೀಟುಗಳಿರುವ ಕಾರುಗಳಲ್ಲಿ 5 ಮಂದಿ ಮಾತ್ರ ಸಂಚಾರ ನಡೆಸಬಹುದು. ಹಾಟ್ ಸ್ಪಾಟ್ ಗಳಾಗಿರುವ ಚೆಂಗಳ, ಚೆಮ್ನಾಡ್ ಗ್ರಾಮಪಂಚಾಯತ್ ಗಳಲ್ಲಿ ಯಾವ ವಿಧದ ವಿನಾಯಿತಿಯೂ ಅನ್ವಯವಲ್ಲ. ರಸ್ತೆಗಳಲ್ಲಿ, ಅಂಗಡಿಗಳಲ್ಲಿ ಜನನಿಭಿಡತೆ ಇರಬಾರದು. ಜನ ಅವರ ಮನೆ ಬಳಿಯ ಅಂಗಡಿಗಳಿಂದ ಸಾಮಾಗ್ರಿ ಖರೀದಿಸಿ ಆದಷ್ಟು ಬೇಗ ಮರಳಬೇಕು ಎಂದವರು ತಿಳಿಸಿದರು.