ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ಜಿಲ್ಲೆಯಿಂದ ದೇಣಿಗೆ ಹರಿದುಬರುತ್ತಿದೆ. ಕೋವಿಡ್ ಸೋಂಕು ಖಚಿತಗೊಂಡು ರೋಗಮುಕ್ತರಾದ ಎರಿಯಾಲ್ ಉಮ್ಮತ್ ಕಂಪೌಂಡ್ ನಿವಾಸಿ ಕುಟುಂಬ ಒಂದು ಲಕ್ಷ ರೂ. ದೇಣಿಗೆ ನೀಡಿದೆ.
ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನ ಎರಿಯಾಲ್ ನಿವಾಸಿ ಈ ಕುಟುಂಬದ 6 ಮಂದಿಗೆ ಕೋವಿಡ್ 19 ಸೋಂಕು ತಗುಲಿತ್ತು. ದುಬಾಯಿಯಿಂದ ಆಗಮಿಸಿದ್ದ ಆಲಿ ಅಸ್ಕರ್ ಎಂಬವರಿಗೆ ಮಾ.21ರಂದು ಪ್ರಥಮ ಬಾರಿಗೆ ಸೋಂಕು ತಗುಲಿತ್ತು. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.27ರಂದು ಇವರ ಪತ್ನಿ ಫಾತಿಮತ್ ಸಹ್ನಿಯಾ ಅವರಿಗೆ, ನಂತರ ಆಲಿ ಅಸ್ಕರ್ ಅವರ ತಾಯಿಗೆ ಸೋಂಕು ತಗುಲಿತ್ತು. ಏ.3ರಂದು ಆಲಿ ಅಸ್ಕರ್ ಅವರ ಅಣ್ಣನ ಪತ್ನಿ ಜಸೀಲಾ ಅವರಿಗೆ, ಏ.7ರಂದು ಜಸೀಲಾ ಅವರ 8 ಮತ್ತು 10 ವರ್ಷ ಪ್ರಾಯದ ಮಕ್ಕಳಿಗೆ ರೋಗ ತಗುಲಿತ್ತು. ಈ 5 ಮಂದಿಯನ್ನೂ ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಪೂರ್ಣ ಗುಣಮುಖರಾದ ಕುಟುಂಬದ ಸದಸ್ಯರು ರಾಜ್ಯ ಸರಕಾರಕ್ಕೆ ಮತ್ತು ಜಿಲ್ಲಾಡಳಿತೆಗೆ ಕೃತಜ್ಞತೆ ತಿಳಿಸಿದ್ದಾರೆ. ಈಗ ಒಂದು ಲಕ್ಷ ರೂ. ಮುಖ್ಯಮಂತ್ರಿ ದುರಂತ ನಿಧಿಗೆ ಹಸ್ತಾಂತರಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನಿಧಿ ಪಡೆದುಕೊಂಡರು.