ತಿರುವನಂತಪುರ: ತಮ್ಮೂರಿಗೆ ಮರಳಲೇ ಬೇಕೆಂದು ಹಟ ಹಿಡಿದ ಇತರ ರಾಜ್ಯಗಳ ಕಾರ್ಮಿಕರನ್ನು ಮಾತ್ರ ತೆರಳಲು ಅವಕಾಶ ನೀಡಿದರೆ ಸಾಕು ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಾಂ ಜೋಸ್ ತಿಳಿಸಿರುವರು.
ರಾಜ್ಯದಲ್ಲೇ ಇರಲು ಬಯಸುವವರನ್ನು ಒತ್ತಾಯಿಸಿ ಊರಿಗೆ ಕಳುಹುವುದು ಬೇಡ. ಈ ವಿಚಾರವನ್ನು ಪೆÇಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಗಮನಿಸಬೇಕು. ಕೇರಳದಲ್ಲೇ ಇರಲು ಬಯಸುವ ಇತರ ರಾಜ್ಯಗಳ ಕಾರ್ಮಿಕರಿಗೆ ಅಗತ್ಯದ ಸಹಾಯ ರಾಜ್ಯ ಸರಕಾರ ಒದಗಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿದರು. ಊರಿಗೆ ತೆರಳಲು ಮನಸ್ಸಿಲ್ಲದೇ ಇರುವವರನ್ನೂ ಕೆಲವೆಡೆ ಊರಿಗೆ ತೆರಳುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೂರುಗಳು ಲಭಿಸಿದ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟಿಸಲಾಗಿದೆ.
ಮೇ 1ರಿಂದ ಇತರ ರಾಜ್ಯಗಳ ಕಾರ್ಮಿಕರನ್ನು ಕೇರಳದಿಂದ ರೈಲಿನ ಮೂಲಕ ಕಳುಹುವ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲ ರೈಲಿನಲ್ಲಿ ಒಡಿಶಾಕ್ಕೆ 1200 ಮಂದಿ ಮರಳಿದ್ದಾರೆ. ಲಾಕ್ ಡೌನ್ ಆದೇಶ ಕೊನೆಗೊಳ್ಳುವ ವೇಳೆ ಕಟ್ಟಡ ನಿರ್ಮಾಣ ಸಹಿತ ಕಾಯಕಗಳು ಮತ್ತೆ ಸಕ್ರಿಯಗೊಳ್ಳಲಿವೆ. ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಗೊಂಡ ನಂತರ ಕೇರಳದಲ್ಲಿ ಅತಿಥಿ ಕಾರ್ಮಿಕರ ಬಗ್ಗೆ ರಾಜ್ಯ ಸರಕಾರ ಹೆಚ್ಚುವರಿ ಕಾಳಜಿ ವಹಿಸಿದೆ. ಇವರಿಗೆ ಆಹಾರ, ವಸತಿ ಸೌಕರ್ಯ ಒದಗಿಸುವಿಕೆಗೆ ಆದ್ಯತೆ ನೀಡಿದೆ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿರುವರು.