ಮಂಜೇಶ್ವರ: ಕೊರೋನಾ ಸೋಂಕಿನ ಕಾರಣ ವಿವಿಧೆಡೆ ಬಾಕಿಯಾಗಿದ್ದ ಕೇರಳೀಯರು ಸ್ವಂತ ಊರಿಗೆ ಮರಳತೊಡಗಿದ್ದಾರೆ. ಗಡಿಪ್ರದೇಶ ತಲಪ್ಪಾಡಿಯ ಮೂಲಕ ವಿದ್ಯಾರ್ಥಿಗಳು, ವಯೋ ವೃದ್ಧರ ಸಹಿತ ಮಂದಿ ಸೋಮವಾರ ರಾಜ್ಯ ಪ್ರವೇಶ ಮಾಡಿದ್ದಾರೆ.
ಸೋಮವಾರ ಆಗಮಿಸಿದವರಲ್ಲಿ ಕರ್ನಾಟಕದ ವಿವಿಧ ಸಂಸ್ಥೆಗಳಲ್ಲಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಈ ನಿಟ್ಟಿನಲ್ಲಿ ಅತ್ಯಧಿಕವಾಗಿತ್ತು. ಮುಂದಿನ ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಸಹಿತ ಕಡೆಗಳಿಂದ ಧಾರಾಳ ಮಂದಿ ಆಗಮಿಸುವ ನಿರೀಕ್ಷೆಗಳಿವೆ. ನೋರ್ಕಾದ ವೆಬ್ ಸೈಟ್ ಮೂಲಕ ನೋಂದಣಿ ನಡೆಸುವ ಮೂಲಕ ರಾಜ್ಯಕ್ಕೆ ಆಗಮಿಸಲು ದಿನಾಂಕ ನಿಗದಿಪಡಿಸಲಾಗುವುದು. ಇಲ್ಲದಲ್ಲದೆ ತುರ್ತು ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಬೇರೆಯೇ ವ್ಯವಸ್ಥೆಗಳು ಗಡಿಪ್ರದೇಶದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಟೋಕನ್ ವ್ಯವಸ್ಥೆ ಮೂಲಕ ವ್ಯವಸ್ಥೆಗಳಿವೆ. ತಲಪ್ಪಾಡಿಯಲ್ಲಿ ಈಗ 60 ಹೆಲ್ಪ್ ಡೆಸ್ಕ್ ಸಜ್ಜುಗೊಳಿಸಲಾಗಿದೆ. ಶೀಘ್ರದಲ್ಲೇ 100 ಹೆಲ್ಪ್ ಡೆಸ್ಕ್ ಸಿದ್ಧಪಡಿಸಲಾಗುವುದು ಎಂದು ಮಂಜೇಶ್ವರ ತಹಸೀಲ್ದಾರ್ ಪಿ.ಜೆ.ಆಂಟೋ ತಿಳಿಸಿದರು. ಸುರಕ್ಷೆ ಸಹಿತ ವ್ಯವಸ್ಥೆಗಳಿಗಾಗಿ 24 ತಾಸೂ ಚಟುವಟಿಕೆ ನಡೆಸುವ ಅಗ್ನಿಶಾಮಕ ವಾಹನವೂ ಇಲ್ಲಿದೆ.
ಅಭಿಮತ:
ಮನಸ್ಸು ನಿರಾಳವಾಗಿದೆ: ವಿದ್ಯಾರ್ಥಿಯೊಬ್ಬರ ಅಭಿಮತ
ಅನೇಕ ಕಾಲಗಳಿಂದ ಉಸಿರುಗಟ್ಟುವ ವಾತಾವರಣದಲ್ಲಿದ್ದು, ಈಗ ಊರಿಗೆ ಮರಳುತ್ತಿರುವುದು ಮನಸ್ಸಿಗೆ ನಿರಾಳತೆ ತಂದಿದೆ ಎಂದು ಜಿಲ್ಲೆಯ ನಿವಾಸಿ ವಿದ್ಯಾರ್ಥಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿರುವ ಇವರು ರಾಜ್ಯ ಸರ್ಕಾರ, ಕಾಸರಗೋಡು ಜಿಲ್ಲಾಡಳಿತೆ ನಡೆಸಿರುವ ಈ ವ್ಯವಸ್ಥೆಗೆ ಕೃತಜ್ಞತೆ ತಿಳಿಸಿದರು.