ಕಾಸರಗೋಡು: ಜಿಲ್ಲೆಯಲ್ಲಿ ಸತತ ಐದನೇ ದಿನವಾದ ಮಂಗಳವಾರ ಕೂಡ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 179 ಮಂದಿಗೆ ಸೋಂಕು ತಗಲಿದ್ದು, ಇದೀಗ ಆಸ್ಪತ್ರೆಗಳಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1135 ಮಂದಿ ಮನೆಗಳಲ್ಲಿ, 21 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 262 ಮಂದಿ ತಮ್ಮ ನಿಗಾ ಅವಧಿ ಪೂರ್ಣ ಗೊಳಿಸಿದ್ದಾರೆ.
4867 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 4198 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ಸೆಂಟಿನಲ್ ಸರ್ವೆಲೆನ್ಸ್ ಅಂಗವಾಗಿ ಜಿಲ್ಲೆಯ ಆರೋಗ್ಯ ಕಾರ್ಯಕರ್ತರು, ಇತರ ರಾಜ್ಯಗಳ ಕಾರ್ಮಿಕರು, ಸಾಮಾಜಿಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಸಹಿತ 420 ಮಂದಿಯ ಸ್ಯಾಂಪಲ್ ತಪಾಣೆಗೆ ಕಳುಹಿಸಲಾಗಿದೆ.
ಕೇರಳದಲ್ಲಿ ಮೂವರಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಮಂಗಳವಾರ ಹೊಸದಾಗಿ ಮೂವರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಈ ಮೂವರು ವಯನಾಡು ಜಿಲ್ಲೆಯವರು. ಈ ಮೂವರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಚೆನ್ನೈಗೆ ಹೋಗಿದ್ದ ಆ್ಯಂಬುಲೆನ್ಸ್ ಚಾಲಕನ ತಾಯಿ, ಪತ್ನಿ ಹಾಗು ಕ್ಲೀನರ್‍ನ ಪುತ್ರನಿಗೆ ಸೋಂಕು ಬಾಧಿಸಿದೆ.
ರಾಜ್ಯದಲ್ಲಿ ಒಟ್ಟು 21342 ಮಂದಿ ನಿಗಾದಲ್ಲಿದ್ದು, ಈ ಪೈಕಿ 21034 ಮಂದಿ ಮನೆಗಳಲ್ಲೂ, 308 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ ವಿವಿಧ ಆಸ್ಪತ್ರೆಗಳಿಗೆ ಶಂಕಿತ 86 ಮಂದಿಯನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಈ ವರೆಗೆ 33800 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 33265 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 502 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, ಪ್ರಸ್ತುತ 37 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು-3, ಕಣ್ಣೂರು-18, ಕೋಟ್ಟಯಂ-6, ವಯನಾಡು-4, ಕೊಲ್ಲಂ.-3, ಪತ್ತನಂತಿಟ್ಟ-1, ಇಡುಕ್ಕಿ-1, ಪಾಲ್ಘಾಟ್-1 ಎಂಬಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
14 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 14 ಕೇಸುಗಳನ್ನು ದಾಖಲಿಸಲಾಗಿದೆ. 46 ಮಂದಿಯನ್ನು ಬಂ„ಸಲಾಗಿದೆ. 9 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ 1, ವೆಳ್ಳರಿಕುಂಡ್ 2, ವಿದ್ಯಾನಗರ 3, ಕಾಸರಗೋಡು 1, ಹೊಸದುರ್ಗ 1, ಚಿತ್ತಾರಿಕಲ್ 3, ಮೇಲ್ಪರಂಬ 1, ಅಂಬಲತ್ತರ 1 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2043 ಕೇಸುಗಳು ದಾಖಲಾಗಿವೆ. 2611 ಮಂದಿಯನ್ನು ಬಂಧಿಸಲಾಗಿದ್ದು, 848 ವಾಹನಗಳನ್ನು ವಶಪಡಿಸಲಾಗಿದೆ.
ಸಿಬ್ಬಂದಿಗೆ ಭೋಜನ ಲಭಿಸುತ್ತಿಲ್ಲ ಎಂಬ ವರದಿ ಹುಸಿ ಮಾಹಿತಿ:
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಭೋಜನ ಲಭಿಸುತ್ತಿಲ್ಲ ಎಂಬ ಬಗ್ಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ವರದಿ ಹುಸಿ ಮಾಹಿತಿಯಾಗಿದೆ ಎಂದು ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಜಯರಾಂ ಕೆ.ಕೆ. ತಿಳಿಸಿದರು. ಆಸ್ಪತ್ರೆಯ ಕ್ಯಾಂಟೀನ್ ಸಿಬ್ಬಂದಿಗೆ ವಿಶ್ರಾಂತಿ ಒದಗಿಸುವ ನಿಟ್ಟಿನಲ್ಲಿ ಮೇ 3ರಿಂದ 12 ವರೆಗೆ ಕ್ಯಾಂಟೀನ್ ಮುಚ್ಚುಗಡೆ ನಡೆಸಲಾಗಿದ್ದು, ಸಮೀಪದಲ್ಲೇ ಇರುವ ಜೆ.ಪಿ.ಎಚ್.ಎನ್.ಹಾಸ್ಟೆಲ್ ಸಿಬ್ಬಂದಿಗಿರುವ ಉಚಿತ ಮೆಸ್ ಚಟುವಟಿಕೆ ನಡೆಸುತ್ತಿದೆ. ಇಲ್ಲಿಗೆ ವಿವಿಧ ಸಂಘಟನೆಗಳು, ವ್ಯಕ್ತಿಗಳು ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ. ಬಿಡುವಿರುವ ಸಿಬ್ಬಂದಿ ಇಲ್ಲಿ ಅಡುಗೆ, ತತ್ಸಂಬಂಧಿ ಚಟುವಟಿಕೆ ನಡೆಸುತ್ತಿದ್ದಾರೆ.
2 ಲಕ್ಷ ರೂ. ದೇಣಿಗೆ : ಮುಖ್ಯಮಂತ್ರಿ ಅವರ ದುರಂತ ಪರಿಹಾರ ನಿಧಿಗೆ ಜಿಲ್ಲೆಯಿಂದ ಸಹಾಯ ಹಸ್ತಗಳು ಮುಂದುವರಿಯುತ್ತಿವೆ. ಬಹರೈನ್ ಇಲೆಕ್ಟ್ರಿಸಿಟಿ ಆ್ಯಂಡ್ ವಾಟರ್ ಅಥಾರಿಟಿ ಪ್ರಾಜೆಕ್ಟ್‍ನ ಸಲಹೆಗಾರರಾಗಿರುವ ಜಿಲ್ಲೆಯ ಮಾವುಂಗಾಲ್ ನಿವಾಸಿ ರಾಮಚಂದ್ರನ್, ಪತ್ನಿ ರಾಣಿ ಅವರು 2 ಲಕ್ಷ ರೂ.ವನ್ನು ನಿಧಿಗೆ ದೇಣಿಗೆ ನೀಡಿದ್ದಾರೆ. ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್ ಮತ್ತು ಸಹಾಯಕ ತಹಸೀಲ್ದಾರ್ ವಿ.ರವೀಂದ್ರನ್ ಚೆಕ್ ಪಡೆದುಕೊಂಡರು.