ಕಾಸರಗೋಡು: ಕೋವಿಡ್ 19 ವಿರುದ್ದ ಕಾರ್ಯಾಚರಣೆಯಲ್ಲಿ ವೈದ್ಯಕೀಯ, ಸ್ಥಳೀಯಾಡಳಿತ, ಪೋಲೀಸ್ ಹಾಗೂ ಸ್ವಚ್ಚತಾ ಕರ್ಮಚಾರಿಗಳ ಜೊತೆಗೆ ಇದೀಗ ಶಿಕ್ಷಕರ ಸೇವೆಯನ್ನೂ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯ ಶಿಕ್ಷಕರನ್ನು ಕೋವಿಡ್ ವಿರುದ್ದ ಕಾರ್ಯಾಚರಣೆಗೆ ನೇಮಿಸಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರ ಸಂಪೂರ್ಣ ಮಾಹಿತಿ ಒದಗಿಸುವಂತೆ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿರ್ದೇಶಿಸಿದ್ದಾರೆ.
ವಿದೇಶದಲ್ಲಿ ನೆಲಸಿರುವವರು ಊರಿಗೆ ಕರೆತರುವ ಹಿನ್ನೆಲೆಯಲ್ಲಿ ಇವರಿಗೆ ಅಗತ್ಯದ ಕ್ವಾರಂಟೈನ್ ವ್ಯವಸ್ಥೆ ಏರ್ಪಡಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಬೇಕಾಗುವ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯ ಮನಗಂಡು ಸರ್ಕಾರ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ. 24 ತಾಸುಗಳ ಕಾಲ ಕಾರ್ಯಾಚರಣೆ ನಡೆಯಲಿದ್ದು, ಇದಕ್ಕಾಗಿ ಮೂರು ಪಾಳಿಗಳಲ್ಲಿ ಕೆಲಸಕ್ಕೆ ನೇಮಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಂಚಾರ ವ್ಯವಸ್ಥೆಗೆ ರಸ್ತೆ ಸಾರಿಗೆ ಬಸ್ ಗಳನ್ನು ಏರ್ಪಡಿಸಲಾಗುತ್ತದೆ.
ತಲಪಾಡಿ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ 19 ಹೆಲ್ಪ್ ಡೆಸ್ಕ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಇಲ್ಲಿಯ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ. ಜಿಲ್ಲೆಯ 900 ಮಂದಿ ಅಧ್ಯಾಪಕರ ಪಟ್ಟಿಯೊಂದನ್ನು ತಯಾರಿಸಲಾಗಿದ್ದು, ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾಧಿಕಾರಿಗಳು ಶಿಕ್ಷಣ ಉಪನಿರ್ದೇಶಕರಿಗೆ ಆದೇಶಿಸಿದ್ದಾರೆ.