ಬೀಜಿಂಗ್: ಚೀನಾದಲ್ಲಿ ಹೊಸದಾಗಿ 15 ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಕೋವಿಡ್- 19 ಹುಟ್ಟಿಕೊಂಡಿದ್ದ ವುಹಾನ್ ನಗರದಲ್ಲಿ ಕಳೆದ ಕೆಲ ವಾರಗಳಲ್ಲಿ ಸುಮಾರು 9 ಮಿಲಿಯನ್ ಜನರನ್ನು ಪರೀಕ್ಷೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಯಾವುದೇ ಲಕ್ಷಣ ರಹಿತ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಪ್ರಾಧಿಕಾರ ಮಂಗಳವಾರ ತಿಳಿಸಿದೆ.
ಚೀನಾ ರಾಷ್ಟ್ರೀಯ ಆರೋಗ್ಯ ಕಮಿಷನ್ ನೀಡಿರುವ ಮಾಹಿತಿ ಪ್ರಕಾರ ಸೋಮವಾರ ಐದು ಬೇರೆ ಕಡೆಯಿಂದ ಬಂದಂತಹ ಪ್ರಕರಣಗಳಾಗಿದ್ದು, 10 ಲಕ್ಷಣ ರಹಿತ ಪ್ರಕರಣಗಳು ಕಂಡುಬಂದಿವೆ ಎಂದು ವರದಿಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ, ವಿದೇಶದಿಂದ ಬಂದಂತಹ 39 ಪ್ರಕರಣಗಳು ಸೇರಿದಂತೆ 371 ಲಕ್ಷಣ ರಹಿತ ಪ್ರಕರಣಗಳು ವೈದ್ಯಕೀಯ ವೀಕ್ಷಣೆಯಲ್ಲಿವೆ ಎಂದು ಹೇಳಲಾಗಿದೆ. ರೋಗಿಗಳಿಗೆ ಕೋವಿಡ್-19 ಪಾಸಿಟಿವ್ ಪರೀಕ್ಷೆ ಮಾಡುತ್ತಿರುವುದರಿಂದ ಲಕ್ಷಣ ರಹಿತ ಪ್ರಕರಣಗಳು ತೊಂದರೆಯಾಗಿ ಕಾಡುತ್ತಿವೆ ಆದರೆ, ಜ್ವರ, ಕೆಮ್ಮ ಅಥವಾ ಗಂಟಲು ಕೆರೆತದಂತಹ ಲಕ್ಷಣಗಳು ಗೋಚರಿಸುತ್ತಿಲ್ಲ. ಆದಾಗ್ಯೂ, ಈ ಕಾಯಿಲೆ ಇತರರಿಗೂ ಹರಡುವ ಭೀತಿಯಂತೂ ಉಂಟಾಗಿದೆ. ಈ ಮಧ್ಯೆ ಕೊರೋನಾವೈರಸ್ ಪಾಸಿಟಿವ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಹು ವೈಫೆಂಗ್ಸ್ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳಿಂದ ಇಂದು ಮಾಹಿತಿ ತಿಳಿದುಬಂದಿದೆ.
ವುಹಾನ್ ನಲ್ಲಿ 60 ಸಾವಿರ ಲಕ್ಷಣ ರಹಿತ ಜನರನ್ನು ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿದೆ ಎಂದು ಗ್ಲೊಬಲ್ ಟೈಮ್ ವರದಿ ಮಾಡಿದೆ. ಸೋಮವಾರದ ವರದಿ ಪ್ರಕಾರ ಸದ್ಯ ಚಿಕಿತ್ಸೆ ಪಡೆಯುತ್ತಿರುವ 73 ರೋಗಿಗಳು ಸೇರಿದಂತೆ ಚೀನಾದಲ್ಲಿ ಸೋಂಕಿತರ ಸಂಖ್ಯೆ 83 ಸಾವಿರದ 22 ಆಗಿದೆ. 78 ಸಾವಿರದ 315 ಜನರು ಗುಣಮುಖರಾಗಿದ್ದಾರೆ. 4634 ಜನರು ಮೃತಪಟ್ಟಿದ್ದಾರೆ.