ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಸೋಂಕು ಹೆಚ್ಚಳಗೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಭೀತಿ ಬೇಡ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲೆಯಲ್ಲಿ ಸಾಕಷ್ಟು ಇತಿಮಿತಿಗಳಿದ್ದರೂ, ಕೋವಿಡ್ ರೋಗದಿಂದ ಒಂದೇ ಒಂದು ಮರಣ ಸಂಭವಿಸಿಲ್ಲ ಎಂಬುದು ಗಮನಾರ್ಹ. ಎರಡನೇ ಹಂತದಲ್ಲಿ 70 ಮಂದಿಗೂ, ಮೂರನೇ ಹಂತದಲ್ಲಿ 11 ಮಂದಿಗೂ ಸಂಪರ್ಕ ಮೂಲಕ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಫೆ.3ರಂದು ಮೊದಲ ಕೋವಿಡ್ ಸೋಂಕು ವರದಿಯಾಗಿತ್ತು. ನಂತರ 39 ದಿನಗಳ ನಂತರ (ಮಾ.14ರಂದು) ಎರಡನೇ ಸೋಂಕು ಪ್ರಕರಣ ವರದಿಯಾಗಿತ್ತು. ಮಾ.17ರಂದು ಮೂರನೇ ಕೇಸ್ ಜಿಲ್ಲೆಯಲ್ಲಿ ಖಚಿತಗೊಂಡಿತ್ತು. ನಂತರ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿತ್ತು. ಮೂರನೇ ಹಂತದಲ್ಲಿ ಶೇ 4.31(11 ಮಮದಿಗೆ) ಮಾತ್ರ ಸಂಪರ್ಕ ಮೂಲಕ ಸೋಂಕು ತಗುಲಿತ್ತು. 34 ದಿನಗಳ ಅವಧಿಯಲ್ಲಿ ಯಾರಿಗೂ ಸಂಪರ್ಕ ಮೂಲಕ ಸೋಂಕು ಖಚಿತವಾಗಿಲ್ಲ. ಈ ವಿಚಾರಗಳಲ್ಲಿ ಗಮನಿಸುವಾಗ ಸಂಪರ್ಕ ಮೂಲಕ ಸೋಂಕು ಹರಡುವ ಭೀತಿ ಬೇಕಿಲ್ಲ ಎಂದವರು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರು ಜಾಗರೂಕತೆ ಕೈಬಿಡಬಾರದು ಎಂದು ತಿಳಿಸಿದ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧಾರಣೆ, ಸಾಬೂನು, ಸಾನಿಟೈಸರ್ ಬಳಸಿ ಕೈ ಶುಚೀಕರಿಸುವ ಸಹಿತ ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನುಡಿದಿರುವರು.