ನವದೆಹಲಿ:ಮೊದಲ ಹಂತದಲ್ಲಿ ಆರು ರಫೇಲ್ ಯುದ್ಧ ವಿಮಾನಗಳು ಜುಲೈ 27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ.ಇದು ಭಾರತೀಯ ವಾಯುಪಡೆಯ ಯುದ್ಧ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆಗೆ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ಬಳಿಕ ಉಭಯ ದೇಶಗಳ ನಡುವಣ ಪರಿಸ್ಥಿತಿ ಹದಗೆಟ್ಟಿರುವಂತೆಯೇ ವಾಯುಪಡೆ ಹೈ ಆಲರ್ಟ್ ಆಗಿದೆ. ಜೂನ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಫ್ರಾನ್ಸ್ನಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಇದ್ದರೂ ನಿಗದಿಯಾಗಿರುವಂತೆ ಭಾರತಕ್ಕೆ ಯುದ್ಧ ವಿಮಾನಗಳನ್ನು ತಲುಪಿಸಲಾಗುವುದು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.ರಫೇಲ್ ಯುದ್ದ ವಿಮಾನಗ ಆಗಮನವು ಐಎಎಫ್‍ನ ಒಟ್ಟಾರೆ ಯುದ್ಧ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಭಾರತದ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲಿದೆ. ಈ ಬಗ್ಗೆ ಕೇಳಿದಾಗ, ಐಎಎಫ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಮಾನದ ಮೊದಲ ಸ್ಕ್ವಾಡ್ರನ್ ನ್ನು ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ಇರಿಸಲಾಗುತ್ತಿದೆ.ಇದು ಐಎಎಫ್‍ನ ಅತ್ಯಂತ ಆಯಕಟ್ಟಿನ ನೆಲೆಗಳಲ್ಲಿ ಒಂದಾಗಿದೆ.
ಸುಮಾರು 58,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‍ನಲ್ಲಿ ಫ್ರಾನ್ಸ್‍ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿತ್ತು.