(ನಿನ್ನೆಯಿಂದ)
ರಿಂಗ್ ವರ್ಮ ಬೆಳೆದಂತೆ ತೊಡೆಯ ಇನ್ನೊಂದು ಬದಿ, ಮಲದ್ವಾರದ ಸುತ್ತಲಿನ ಜಾಗ, ಕೆಳ ಹೊಟ್ಟೆಯವರೆಗೂ ಗಜಕರ್ಣ ವಿಸ್ತರಿಸಬಹುದಾಗಿದೆ. ಸಹಿಸಲು ಅಸಾಧ್ಯವಾದ ತುರಿಕೆ ಇರುತ್ತದೆ. ಹೀಗೆ ಅತಿಯಾದ ತುರಿಕೆಯಿಂದಾಗಿ ಕೆಲವೊಮ್ಮೆ ಕೀವಿನಿಂದ ಕೂಡಿದ ಗುಳ್ಳೆಗಳೂ ಬರಬಹುದು. ಈಗುಳ್ಳೆಗಳು ಅತಿಯಾದ ನೋವಿಂದಲೂ ಕೂಡಿರಬಹುದು. ಸಾಮಾನ್ಯವಾಗಿ ಸ್ತ್ರೀಯರಲ್ಲಿ ಯೋನಿ ಭಾಗದಲ್ಲಿ ಈರೀತಿಯ ಗುಳ್ಳೆಗಳು ಕಾಣಸಿಗುತ್ತದೆ. ರೋಗಿಗಳು ಈ ರೀತಿ ತುರಿಸಿ ಅದೇ ಕೈಯಲ್ಲಿ ಮುಖ, ಕಿವಿಗಳನ್ನು ಮುಟ್ಟುವುದರಿಂದ ಈ ರೋಗ ಮುಖ ಮತ್ತು ಕಿವಿಗೆ ಸುಲಭವಾಗಿ ಹರಡುತ್ತದೆ. ಮುಖದಲ್ಲಿ ಈ ರೋಗ ಬಂದಾಗ ಆ ರೋಗಿ ಬಿಸಿಲಿಗೆ ಹೋದಾಗ ಅತಿಯಾದ ತುರಿಕೆ ಅನುಭವಕ್ಕೆ ಬರುತ್ತದೆ. ಗಡ್ಡದಲ್ಲಿ ಈ ರೋಗ ಬಂದಾಗ ಕೀವಿನಿಂದ ಕೂಡಿದ ದೊಡ್ಡ ದೊಡ್ಡ ಗುಳ್ಳೆಗಳು ಬರಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ರೋಗಿಗಳೂ ಹೇಳುವಂತೆ ತುರಿಸದೆಯೂ ಇರುವಂತಿಲ್ಲ. ಆದರೆ ತುರಿಸಿಕೊಳ್ಳಲು ಸಂಕೋಚವಾಗುವ ಈಜಾಗದಲ್ಲಿ ತುರಿಕೆಯಾಗುತ್ತದೆ. ಆಗ ರೋಗಿಗಳು ಮಾಡುವ ಮೊದಲ ಕೆಲಸವೆಂದರೆ ಮನೆಯಲ್ಲಿರುವ ಕ್ರೀಂ ಗಳನ್ನೆಲ್ಲಾ ಹಚ್ಚಿಕೊಳ್ಳುವುದು. ಬೆಟ್ ನೋವೆಟ್, ಕ್ವಾಡ್ರಿಡರ್ಮ್, ಟ್ರಯೋಡಮ್, ಮೆಗಾಸೆಪ್ಟ್ ಮುಂತಾದ ಕ್ರೀಂ ಗಳನ್ನು ಹಲವರು ಹಚ್ಚಿಕೊಂಡು ಉಪಶಮನಕ್ಕೆ ಯತ್ನಿಸುತ್ತಾರೆ. ಇನ್ನು ಕೆಲವರು ವೃತ್ತ ಪತ್ರಿಕೆಗಳು, ಟಿ.ವಿ. ಸಹಿತ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ಹೇಳಲ್ಪಟ್ಟ ಕ್ರೀಂ ಗಳನ್ನೆಲ್ಲ ಹಚ್ಚಿಕೊಳ್ಳಲು ಉತ್ಸುಕರಾಗುತ್ತಾರೆ. ಇಷ್ಟಾದರೂ ವೈದ್ಯರ ಬಳಿ ತೆರಳಲು ನಾಚಿಕೆಪಡುತ್ತಾರೆ.
ಹೀಗೆ ಯಾವುದಾದರೊಂದು ಮುಲಾಮು ಹಚ್ಚಿದಾಗ ರೋಗವು ಒಮ್ಮೆಗೆ ವಾಸಿಯಾದಂತೆ
ಅನುಭವವಾಗುತ್ತದೆ, ಆದರೆ ಮುಂದಿನ ಒಂದು ವಾರದಲ್ಲಿ ರೋಗವು ಮರುಕಳಿಸುತ್ತದೆ. ಆದ್ದರಿಂದ ಸ್ವಂತ ಔಷಧಿಯ ಮೂಲಕ ಪರಿಹಾರ ಕಾಣಲು ಯತ್ನಿಸುವುದರಿಂದ ಗಜಕರ್ಣದ ನಿಜವಾದ ಲಕ್ಷಣ ಅಡಗಿಕೊಳ್ಳುತ್ತದೆ. ಬಳಿಕ ಮುಂದೆ ತಡೆಯಲಾರೆ ವೈದ್ಯರ ಬಳಿ ತೆರಳಿದಾಗ, ರೋಗದ ಸ್ಪಷ್ಟ ಚಹರೆ ಕಾಣಿಸದೆ ವೈದ್ಯರು ಕಷ್ಟಕ್ಕೊಳಗಾಗುತ್ತಾರೆ. ವೈದ್ಯರೇ ರೋಗ ಗುರುತಿಸಿ ಚಿಕಿತ್ಸೆ ನೀಡಲು ಪರದಾಡಿದರೆ ರೋಗಿಯ ಅವಸ್ಥೆ ಕಳವಳಕಾರಿಯಾಗಿರುತ್ತದೆ. ಆಗ ಬೇಕು-ಬೇಡದ ಎಲ್ಲಾ ಔಷಧಿಗಳ ಸಾಕಷ್ಟು ಪ್ರಯೋಗಗಳು ಆಗಿರುತ್ತದೆ.
ನಾಳೆಗೆ..............