ನವದೆಹಲಿ: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ - ಚೀನಾ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದ್ದು, ಈಗ ಮೂರನೇ ಬಾರಿಗೆ ಮಂಗಳವಾರ(ಇಂದು) ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಎರಡೂ ದೇಶಗಳು ಕೋರ್ ಕಮಾಂಡರ್ ಸಭೆಗೆ ಒಪ್ಪಿಕೊಂಡಿರುವುದು ಉತ್ತಮ ಬೆಳವಣಿಗೆ ಮತ್ತು ಈ ಬಾರಿ ಭಾರತದ ಕಡೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹಿಂದೆ ನಡೆದ ಎರಡು ಕಮಾಂಡರ್-ಮಟ್ಟದ ಸಭೆಗಳು ಮೊಲ್ಡೊದಲ್ಲಿ ನಡೆದಿದ್ದವು. ಇದು ಚೀನಾ ಕಡೆಯ ವಾಸ್ತವ ನಿಯಂತ್ರಣ ರೇಖೆ(ಎಲ್ ಎ ಸಿ)ಯಾಗಿದೆ.
ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾ ಪರವಾಗಿ ಮೇಜರ್ ಜನರಲ್ ಲಿಯು ಲಿನ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಲಡಾಖ್ ನ ಗಾಲ್ವಾನ್ ಘಟನೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಉದ್ವಿಗ್ನತೆ ಶಮನಗೊಳಿಸುವ ಉದ್ದೇಶ ಮಾತುಕತೆ ಹೊಂದಿದೆ.
ಜೂನ್ 15 ರಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ, ಚೈನಾ ನಡೆಸಿದ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮ ಗೊಂಡಿದ್ದರು. ಭಾರತೀಯ ಯೋಧರು ನಡೆಸಿದ ಪ್ರತಿದಾಳಿಗೆ ಚೀನಾದ ಸೇನೆಯ ಯೋಧರು ಸಹ ಸಾಕಷ್ಟು ಸಂಖ್ಯೆಯಲ್ಲಿ ಮೃತಪಟ್ಟಿದ್ದು, ಆದರೆ, ಈ ಕುರಿತು ಚೀನಾ ಯಾವುದೇ ಹೇಳಿಕೆಯನ್ನುಈವರೆಗೂ ನೀಡಿಲ್ಲ. ಸರ್ವಪಕ್ಷ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಹೆಸರನ್ನು ನೇರವಾಗಿ ಉಲ್ಲೇಖಿಸಿದ್ದಾರೆ.