ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾನುಷ್ಠಾನ ಜು.5 ರಿಂದ ಸಪ್ಟಂಬರ್ 2ರ ವರೆಗೆ ಸಾಂಪ್ರದಾಯಿಕ ಶ್ರದ್ದೆ-ಭಕ್ತಿಗಳಿಂದ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡಗಳನ್ನು ಅನುಸರಿಸಿ ನಿತ್ಯಾನುಷ್ಠಾನ-ವ್ರತಾನುಷ್ಠಾನಗಳು, ಭಜನೆ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಯಜ್ಞ ಭೂಮಿಯಾದ ಕುಗ್ರಾಮ:
ಉಪ್ಪಳ ಸಮೀಪದ ಕೊಂಡೆವೂರು ದಶಕಗಳ ಹಿಂದಿನವರೆಗೆ ಪಾಳುಬಿದ್ದ ಬೆರಳೆಣಿಕೆಯ ಮನೆಗಳಷ್ಟೇ ಇದ್ದ ಪುಟ್ಟ ಹಳ್ಳಿಯಾಗಿತ್ತು. ಆದರೆ ನಿತ್ಯಾನಂದ ಸ್ವಾಮೀಜಿಗಳು ನಡೆದಾಡಿದ್ದ, ತಪಸ್ಸುಗೈದಿದ್ದ ನೆಲವಾದ ಈ ಹಳ್ಳಿ ಬಳಿಕ ಅವರ ಶಿಷ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಗಮನದೊಂದಿಗೆ ಮತ್ತೆ ಜಗದಗಲ ಗುರುತಿಸುವ ಪ್ರದೇಶವಾಗಿ ಮಾರ್ಪಟ್ಟಿದೆ. ಪ್ರಮುಖವಾಗಿ ವಿಶೇಷ ಯಜ್ಞಗಳ ಮೂಲಕ ಶ್ರೀಗಳ ಸಾಮಾಜಿಕ ಕಳಕಳಿ ಗುರುತಿಸಲ್ಪಟ್ಟಿದೆ. ಸಹಸ್ರ ಚಂಡಿಕಾ ಯಾಗ, ಗಾಯತ್ರಿ ಘೃತ ಸಂಪ್ರಾಪ್ತಿ ಯಾಗ,ಚತುರ್ವೇದ ಸಂಹಿತಾ ಯಾಗ, ಅತಿರಾತ್ರ ಸೋಮಯಾಗಗಳು ಈ ಮಣ್ಣನ್ನು ಪಾವನಗೊಳಿಸಿದೆ. ಜೊತೆಗೆ ಸಾವಯವ ಕೃಷಿ, ಗುರುಕುಲ ಶೈಲಿಯ ಆಧುನಿಕ ಪಠ್ಯಗಳ ವಿದ್ಯಾಪೀಠ, ಆಯುರ್ವೇದ ಗಿಡಗಳ ನಕ್ಷತ್ರ ವನ ಸಹಿತ ಇತರ ವನಗಳು, ಚಿಕಿತ್ಸೆ, ಗೋಶಾಲೆ ಮೊದಲಾದವುಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ.