ತಿರುವನಂತಪುರ: ಪ್ರಸ್ತುತ ಸಾಲಿನ(2019-20) ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಂಗಳವಾರ ಪ್ರಕಟಿಸಲಾಗಿದ್ದು ರಾಜ್ಯದಲ್ಲಿ ಶೇ. 98.82 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡಾ 98.11 ಆಗಿತ್ತು.
ಪ್ರಸ್ತುತ ಸಾಲಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 41906 ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದರು. ಪತ್ತನಂತಿಟ್ಟು ಮತ್ತು ವಯನಾಡದಲ್ಲಿ ಅತಿ ಹೆಚ್ಚು ಫಲಿತಾಂಶ ದಾಖಲಾಗಿದೆ.
ರಾಜ್ಯ ಫ್ರೌಢ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಅವರು ಪಿ.ಆರ್ ಚೇಂಬರಿನಲ್ಲಿ ಮಧ್ಯಾಹ್ನ 2 ಕ್ಕೆ ಫಲಿತಾಂಶ ಘೋಷಣೆ ಮಾಡಿದರು. ಆರು ವೆಬ್‍ಸೈಟ್‍ಗಳಾದ ಪಿಆರ್‍ಡಿ ಲೈವ್ ಮತ್ತು ಸಫಲಂ 2020 ಆಪ್‍ಗಳ ಮೂಲಕ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ರಾಜ್ಯದಲ್ಲಿ 1837 ಶಾಲೆಗಳು ಶೇ. ನೂರು ಫಲಿತಾಂಶ ದಾಖಲಿಸಿವೆ. ಈ ಪೈಕಿ 637 ಸರ್ಕಾರಿ ಶಾಲೆಗಳಾಗಿವೆ. ಇವುಗಳಲ್ಲಿ 796 ಅನುದಾನಿತ ಶಾಲೆಗಳು ಮತ್ತು 404 ಅನುದಾನರಹಿತ ಶಾಲೆಗಳು ಸೇರಿವೆ. ಎಸ್‍ಎಸ್‍ಎಲ್‍ಸಿ ರೆಗ್ಯುಲರ್ಸ್ ಪರೀಕ್ಷೆಗೆ 4,02292 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 4,17,101 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಈ ವರ್ಷ ಇದು ಕಳೆದ ವರ್ಷಕ್ಕಿಂತ ಶೇ. 0.71 ಹೆಚ್ಚು ಫಲಿತಾಂಶವಾಗಿದೆ.
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 41,906 ಆಗಿದೆ. ಕಳೆದ ವರ್ಷ 37,334 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದರು. ಇದು ಕಳೆದ ಸಾಲಿಗಿಂತ 4,572 ರಷ್ಟು ಹೆಚ್ಚಿದೆ. ಖಾಸಗಿ ಪರೀಕ್ಷೆಗೆ ಹಾಜರಾದ 1,770 ವಿದ್ಯಾರ್ಥಿಗಳಲ್ಲಿ 1,356 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹರಾಗಿದ್ದಾರೆ. ಉತ್ತೀರ್ಣತೆ ಶೇಕಡಾ 76.61 ರಷ್ಟಿದೆ.
ರಾಜ್ಯದಲ್ಲೇ ಕುಟ್ಟನಾಡ್ ವಿದ್ಯಾಭ್ಯಾಸ ಜಿಲ್ಲೆಯು ಅತಿ ಹೆಚ್ಚು ಮಂದಿ ಉತ್ತೀರ್ಣರಾದ ಜಿಲ್ಲೆಯಾಗಿದೆ. ಇಲ್ಲಿಯ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ದಾಖಲೆ ನಿರ್ಮಿಸಿದರು. ವಯನಾಡ್ ವಿದ್ಯಾಭ್ಯಾಸ ಜಿಲ್ಲೆ ಅತಿ ಕಡಿಮೆ, ಶೇ 95.04 ಫಲಿತಾಂಶ ದಾಖಲಿಸಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾಭ್ಯಾಸ ಜಿಲ್ಲೆಯಾಗಿದ್ದು 2,736 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿಕೊಂಡಿದ್ದಾರೆ.
ಕೋವಿಡ್ ಭೀತಿಯ ಮಧ್ಯೆ ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ಪೂರ್ತಿಗೊಳಿಸಲಾಗಿತ್ತು. ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಮಾ.10 ರಿಂದ ಆರಂಭಗೊಂಡಿತ್ತು. ಮೂರು ಪರೀಕ್ಷೆಗಳು ಬಾಕಿ ಇರುವಂತೆ ಕೊರೊನಾ ಕಾರಣ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿತು. ಏತನ್ಮಧ್ಯೆ, ಸರ್ಕಾರವು ಕಠಿಣ ಮುನ್ನೆಚ್ಚರಿಕೆಗಳೊಂದಿಗೆ ಮೇ. 26 ರಿಂದ 28ರ ವರೆಗೆ ಉಳಿದ ಪರೀಕ್ಷೆಗಳನ್ನು ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.