ಕಾಸರಗೋಡು: ಚಿಮೇನಿಯಲ್ಲಿರುವ ತೆರೆದ ಕಾರಾಗೃಹದ ಆವರಣದೊಳಗೆ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲ್ ಪಂಪ್ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿದೆ.
ರಾಜ್ಯದ ತೆರೆದ ಜೈಲುಗಳಲ್ಲಿ ಹಮ್ಮಿಕೊಳ್ಳಲಾದ ವಿವಿಧ ಯೋಜನೆಗಳ ಭಾಗವಾಗಿ ಚೀಮೇನಿಯಲ್ಲಿ ನಿರ್ಮಾಣ ಆರಂಭಿಸಿದ್ದ ಪೆಟ್ರೋಲ್ ಪಂಪ್ ನಿರ್ಮಾಣ ಇದೀಗ ಕಾಮಗಾರಿ ಮುಕ್ತಾಯದಲ್ಲಿದೆ. ಜೂನ. 10 ರಂದು ಉದ್ಘಾಟಿಸಲು ಮೊದಲು ಚಿಂತಿಸಲಾಗಿತ್ತಾದರೂ, ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ಅಲ್ಪ ನಿಧಾನಗತಿಯಲ್ಲಿ ಸಾಗಿದ್ದರೂ ಜೂನ್ ಕೊನೆಯ ವಾರದಲ್ಲಿ ಉದ್ಘಾಟಿಸಲು ಸಿದ್ದವಾಗುತ್ತಿದೆ.
ಈ ಮಧ್ಯೆ ಇದರ ಜೊತೆಗೆ ಕಿರು ಮಟ್ಟದ ಚಿಕಿತ್ಸಾ ಕೇಂದ್ರವೂ ಕಾರ್ಯಾಚರಿಸಲಿದೆ. ಈವರೆಗೆ ಜೈಲು ಒಳಭಾಗದಲ್ಲಷ್ಟೇ ಕೈದಿಗಳಿಗಾಗಿ ಚಿಕಿತ್ಸಾ ಕೇಂದ್ರ ಕಾರ್ಯಾಚರಿಸುತ್ತಿತ್ತು. ಆದರೆ ಪೆಟ್ರೋಲ್ ಪಂಪ್ ಕಟ್ಟಡದೊಂದಿಗೆ ನೂತನ ಆರೋಗ್ಯ ಕೇಂದ್ರದ ಕಟ್ಟಡವನ್ನೂ ನಿರ್ಮಿಸಲಾಗಿದೆ. ಇದರಿಂದ ತೆರೆದ ಜೈಲು ಪರಿಸರದ ಸಾರ್ವಜನಿಕರಿಗೂ ಚಿಕಿತ್ಸಾ ಕೇಂದ್ರ ಉಪಯೋಗಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಚಿಮೇನಿಯ ತೆರೆದ ಜೈಲು ಕೇಂದ್ರದ ಪೆಟ್ರೋಲ್ ಪಂಪ್ ನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ವಹಿಸಿಕೊಂಡಿದೆ. ಪೆಟ್ರೋಲ್ ಪಂಪ್ ನ ಸಂಪೂರ್ಣ ನಿರ್ವಹಣೆ ಕೈದಿಗಳಿಗಾಗಿರುತ್ತದೆ ಎನ್ನುವುದು ವಿಶೇಷತೆಯಾಗಿದೆ.