ಕುಂಬಳೆ: ಸಿಮೆಂಟ್ ಶಿಲ್ಪ ರಚನಾ ವೈಶಿಷ್ಟ್ಯದಲ್ಲಿ ತನ್ನದೆ ಆದ ವ್ಯತ್ಯಸ್ಥ ಶೈಲಿಯ ಪ್ರತಿಭಾ ಮುದ್ರೆಯನ್ನೊತ್ತಿರುವ, ಕರ್ನಾಟಕದ ಯುವ ಪ್ರತಿಭಾವಂತ ಶಿಲ್ಪಿ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ವೇಣುಗೋಪಾಲ್ ಆಚಾರ್ಯ ಅವರನ್ನು ಕುಂಬ್ಳೆ ಕೃಷ್ಣನಗರದ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾಸರಗೋಡಿನ ಪಿಲಿಕುಂಜೆಯ ಯಕ್ಷಪುತ್ಥಳಿ ಗೊಂಬೆಮನೆಯ ಕೆ.ವಿ.ರಮೇಶರ ವತಿಯಿಂದ ಗೃಹಸನ್ಮಾನ ಗೌರವ ನಡೆಯಿತು. ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ವೇಣುಗೋಪಾಲ್ ಕುಂಬಳೆ ಅವರ ಸಾಧನೆಯನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು. ಕಲಾವಿದ ಯಶ್ ರಾಜ್ ಕುಂಬ್ಳೆ, ಕುಮಾರಸ್ವಾಮಿ ಮರ್ದಂಬೈಲು ಸೇರಿದಂತೆ ವೇಣುಗೋಪಾಲ್ ಅವರ ಕುಟುಂಬದವರು ಉಪಸ್ಥಿತರಿದ್ದರು.
ವೇಣುಗೋಪಾಲ್ ಆಚಾರ್ಯ ಕುಂಬಳೆ ಅವರು ಇತ್ತೀಚೆಗಷ್ಟೇ ಅಗಲಿದ ಕುಂಬ್ಳೆಯ ಖ್ಯಾತ ಶಿಲ್ಪಿ ಎಂ.ಜಿ.ಕೆ ಆಚಾರ್ಯರ ಪುತ್ರನಾಗಿದ್ದು, ಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಕಾಣುವ ಸಿಮೆಂಟ್ ಶಿಲ್ಪವೈಭವ, ಸುಳ್ಯರಂಗಮನೆಯ ನಟರಾಜ ವಿಗ್ರಹ ಸಹಿತ ಗದಗ, ಬೀದರ,ಬೆಂಗಳೂರು, ತುಮಕೂರು, ಬಸವಕಲ್ಯಾಣ ಸಹಿತ ಕರ್ನಾಟಕದ ಅನೇಕ ಕಡೆ ನಿರ್ಮಿಸಿದ ಶಿಲ್ಪಗಳಿಂದ ಖ್ಯಾತರಾಗಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಮನೆಯಲ್ಲೇ ಉಳಿದಿರುವ ಕಲಾವಿದನನ್ನು ಹುಡುಕಿ ಹೋಗಿ ಸನ್ಮಾನಿಸಿ ಗೌರವಿಸಿರುವುದು ಗೊಂಬೆಯಾಟ ಸೂತ್ರಧಾರಿ ಕೆ.ವಿ.ರಮೇಶರ ಕಲಾಕಾಳಜಿಯ ಧ್ಯೋತಕವಾಗಿದೆ.