HEALTH TIPS

ಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿರುವ ಮುಂಬೈಗೆ ಕೇರಳ ಸಹಾಯಹಸ್ತ

             ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ 1.90 ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ 67 ಸಾವಿರ ಜನರಿಗೆ ಮಹಾಮಾರಿ ವಕ್ಕರಿಸಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಹಾರಾಜ್ಯ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಕಿಡಿಕಾರುತ್ತಿದೆ. ಅದರಲ್ಲೂ ಮುಂಬೈ ನಗರದಲ್ಲಿ ಕೊರೊನಾ ರಣಕೇಕೆ ಹಾಕಿದೆ. ವಾಣಿಜ್ಯ ನಗರದಲ್ಲಿ 40 ಸಾವಿರ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಮಹಾರಾಷ್ಟ್ರಕ್ಕೆ ದೊಡ್ಡ ತಲೆನೋವಾಗಿದೆ.
       ಬೆಡ್‌ಗಳ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿಗಳ ಕೊರತೆ ಹಾಗೂ ಕ್ವಾರಂಟೈನ್‌ ವ್ಯವಸ್ಥೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಮುಂಬೈ ನಗರಕ್ಕೆ ಕೇರಳ ಸರ್ಕಾರ ಸಹಾಯಹಸ್ತ ಚಾಚಿದೆ.
            ಮುಂಬೈಗೆ 100 ವೈದ್ಯರು, 50 ನರ್ಸ್:
    ಮುಂಬೈ ನಗರದಲ್ಲಿ ಉಂಟಾಗಿರುವ ಕೊರೊನಾ ವೈರಸ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಕೇರಳ ಸರ್ಕಾರ ಸಹಾಯಹಸ್ತ ಚಾಚಿದೆ. ಕೇರಳದಿಂದ 100 ವೈದ್ಯರು ಹಾಗು 50 ನರ್ಸ್‌ಗಳು ಮುಂಬೈಗೆ ತೆರಳಲಿದ್ದಾರೆ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಸಚಿವ ಥಾಮಸ್ ಐಸಾಕ್ ಎಎನ್ಐಗೆ ತಿಳಿಸಿದ್ದಾರೆ.
   ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೆಲಸ :
     ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪ ಅಧೀಕ್ಷಕ ಡಾ.ಸಂತೋಷ್ ಕುಮಾರ್ ನೇತೃತ್ವದಲ್ಲಿ ಕೇರಳ ವೈದ್ಯರು ಮುಂಬೈಗೆ ತೆರಳಲಿದ್ದು, ಸೋಮವಾರ 16 ಜನರ ವೈದ್ಯರ ತಂಡ ಮುಂಬೈ ತಲುಪಿದೆಯಂತೆ. ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಈ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಉಳಿದ ವೈದ್ಯರು ಹಾಗೂ ನರ್ಸ್‌ಗಳು ಇನ್ನೆರಡು ದಿನಗಳಲ್ಲಿ ಮುಂಬೈ ಸೇರಲಿದ್ದಾರೆ.
  ಕೇರಳ, ಮುಂಬೈ ಸ್ಥಿತಿ ಬೇರೆ ಇದೆ:
      ''ಕೇರಳದ ಪರಿಸ್ಥಿತಿಗೂ ಮುಂಬೈನ ಪರಿಸ್ಥಿತಿಗೂ ಹೋಲಿಕೆ ಇಲ್ಲ. ಮುಂಬೈನಲ್ಲಿ 30 ಮಿಲಿಯನ್‌ ಹೆಚ್ಚು ಜನರು ಇದ್ದಾರೆ. ಅತಿ ದೊಡ್ಡ ಸ್ಲಂ ಇದೆ. ಇಲ್ಲಿ ಕೊರೊನಾ ವೈರಸ್ ಎದುರಿಸುವ ತಂತ್ರಗಳು ವಿಭಿನ್ನವಾಗಿರಲಿದೆ. ಇಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ. ಮಹಾರಾಷ್ಟ್ರದ ವೈದ್ಯರು ಎಲ್ಲರೂ ಒಟ್ಟಿಗೆ ಹೋರಾಡಬೇಕಿದೆ'' ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.
          ಕೊರೊನಾ ಹೋರಾಟದಲ್ಲಿ ಮೇಲುಗೈ ಸಾಧಿಸಿರುವ ಕೇರಳ :
    ದೇಶದಲ್ಲಿ ಮೊದಲ ಕೊರೊನಾ ವೈರಸ್ ಪತ್ತೆಯಾಗಿದ್ದು ಕೇರಳದಲ್ಲಿ. ಕೊವಿಡ್ ವಿರುದ್ಧ ಕೇರಳ ವೈದ್ಯರು ಸಮರ್ಪಕವಾಗಿ ಹೋರಾಡಿದ್ದಾರೆ. ಅದರ ಪರಿಣಾಮ ಭಾರಿ ಸೋಂಕಿನಿಂದ ತಪ್ಪಿಸಿಕೊಂಡಿದೆ. ಒಂದು ಹಂತಕ್ಕೆ ಕೊವಿಡ್ ಕೇಸ್‌ಗಳು ಸಂಪೂರ್ಣವಾಗಿ ಚೇತರಿಕೆ ಕಾಣುವ ಹಂತಕ್ಕೆ ಹೋಗಿತ್ತು. ಆದರೆ, ಹೊರರಾಜ್ಯ ಮತ್ತು ವಿದೇಶಗಳಿಂದ ರಾಜ್ಯಕ್ಕೆ ಮರಳಿದವರಿಂದ ಸೋಂಕು ಹೆಚ್ಚಾಗಿದೆ. ಪ್ರಸ್ತುತ ಕೇರಳದಲ್ಲಿ ಒಟ್ಟು ಸೋಂಕಿತರ ಸಂಕ್ಯೆ 1270ಕ್ಕೆ ಏರಿದೆ. ಅದರಲ್ಲಿ 670 ಕೇಸ್ ಸಕ್ರಿಯವಾಗಿದೆ. 590 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 10 ಮಂದಿ ಮೃತಪಟ್ಟಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries