ಮುಳ್ಳೇರಿಯ: ವಿಶ್ವದ ಅತಿದೊಡ್ಡ ಸರ್ಪ ಪತಂಗವೊಂದನ್ನು ನೀಲೇಶ್ವರದಲ್ಲಿ ಪತ್ತೆಹಚ್ಚಲಾಗಿದೆ. ನೀಲೇಶ್ವರ ಪಶ್ಚಿಮ ಕೊಳಬೈಲು ನಿವಾಸಿ ಶ್ರೀವಿದ್ಯಾ ಅವರ ಮನೆಯ ಬಳಿ ಇಂತಹ ಅತ್ಯಪೂರ್ವ ಪತಂಗ ಮಂಗಳವಾರ ಕಂಡುಬಂದಿದೆ.
ಅಟ್ಲಾಸ್ ಚಿಟ್ಟೆ ಎಂದು ಕರೆಯಲ್ಪಡುವ ಇದು ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ನಿಬಿಡ ಅರಣ್ಯ ಪ್ರದೇಶಗಳಲ್ಲಿ ಮಾತ್ರ ವಾಸಿಸುವ ಇಂತಹ ಪತಂಗಗಳು ಕೆಲವೊಮ್ಮೆ ಅಪೂರ್ವವೆಂಬಂತೆ ನಾಡಿನೆಡೆಗೆ ಹಾರಿ ಬರುತ್ತದೆ. ಈ ಪತಂಗದ ಎರಡೂ ರೆಕ್ಕೆಗಳನ್ನೂ ಪೂರ್ಣ ಪ್ರಮಾಣದಲ್ಲಿ ಬಿಚ್ಚಿದಾಗ 240 ಮಿ.ಮೀ ಉದ್ದವಿರುತ್ತದೆ. ಇದು ಕಂದು ಬಣ್ಣದ ಮೈಬಣ್ಣವನ್ನು ಹೊಂದಿರುತ್ತದೆ. ಮುಂಭಾಗದ ರೆಕ್ಕೆಗಳು ಹಾವಿನ ಕಣ್ಣುಗಳಂತೆ ಕಪ್ಪು ಕಲೆಗಳನ್ನು ಹೊಂದಿವೆ. ಇದನ್ನು ಶತ್ರುಗಳ ವಿರುದ್ಧ ರಕ್ಷಿಸಲು ಬಳಸಲಾಗುತ್ತದೆ.