ಪೆರ್ಲ: ಸಾಮಾನ್ಯವಾಗಿ ಕೇರಳ ರಾಜ್ಯ ಯಾವುದೇ ಯೋಜನೆಯಲ್ಲಿ ಯಾವಾಗಲೂ ತಾವೇ ಮೇಲು ಎಂದೆನಿಸಿಕೊಳ್ಳಲು ಇನ್ನಿಲ್ಲದೆ ಹೆಣಗಾಡುವ ಮಧ್ಯೆ ಇಲ್ಲೊಂದು ಗಡಿ ಗ್ರಾಮ ಸಂಪೂರ್ಣ ದ್ವೀಪದಂತೆ ಇತರೆಡೆಗಳ ಸಂಪರ್ಕ ಕಡಿದುಕೊಳ್ಳುವ ಭೀತಿ ಎದುರಿಸುತ್ತಿರುವುದು ದುರ್ದೈವ.
ಎಣ್ಮಕಜೆ ಗ್ರಾ.ಪಂ.ನ ಒಂದನೇ ವಾರ್ಡ್ ಸಾಯ ಹಾಗೂ ಎರಡನೇ ವಾರ್ಡ್ ಬಾಕಿಲಪದವು ಸೀರೆಹೊಳೆಯಾಚೆ ಕರ್ನಾಟಕದೊಂದಿಗೆ ಗಡಿ ಹೊಂದಿರುವ ಸುಮಾರು 6 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಕುಗ್ರಾಮ. ಎಣ್ಮಕಜೆ ಗ್ರಾ.ಪಂ.ನ ನಲ್ಕ ಎಂಬಲ್ಲಿಂದ ಸಾಗುವ ಬಿರ್ಮೂಲೆ ರಸ್ತೆ ಪ್ರಹ್ಲಾದಪುರದಲ್ಲಿ ಸೀರೆಹೊಳೆಗೆ ಬಂದು ತಲಪುತ್ತದೆ. ಬಳಿಕ ಹೊಳೆದಾಟಿ ಬಾಕಿಲಪದವು, ಕಲ್ಯಾಟೆ, ಕೂರ್ಲುಗಯ, ಎರುಗಲ್ಲು, ಚವರ್ಕಾಡು, ಕುಞÂಪ್ಪಾರೆ, ಅಡ್ಯನಡ್ಕ, ಸಾಯ ಮೊದಲಾದೆಡೆಗಳಿಗೆ ತಲಪುತ್ತದೆ.
ಆದರೆ ಸೀರೆ ಹೊಳೆಗೆ ಈವರೆಗೂ ಸೇತುವೆ ಆಗದಿರುವುದರಿಂದ ಬೇಸಿಗೆಯಲ್ಲಷ್ಟೇ ಈ ಊರುಗಳಿಗೆ ಹೊಳೆದಾಟಿ ತಲಪಬಹುದು. ಮಳೆಗಾಲದಲ್ಲಿ ಅಡ್ಕಸ್ಥಳದ ಮೂಲಕ ಗಡಿ ಕರ್ನಾಟಕದ ಪ್ರದೇಶ ಸಾರಡ್ಕ, ಅಡ್ಯನಡ್ಕದ ಮೂಲಕ ಸಾಗಬೇಕಾಗುತ್ತಿದೆ.
ಕೋವಿಡ್ ಕೊರೊನಾ ಇಲ್ಲಿ ಬೀರಿದ ಪರಿಣಾಮ ಏನು ಗೊತ್ತೇ:
ಪ್ರಸ್ತುತ ಕೋವಿಡ್ ಹಿನ್ನೆಲೆಯಿಂದ ಮುಚ್ಚಲ್ಪಟ್ಟಿರುವ ಅಂತರ್ ರಾಜ್ಯ ಗಡಿಗಳಿಂದಾಗಿ ಬಾಕಿಲಪದವು, ಸಾಯ, ಕೂಟೇಲು ಮೊದಲಾದ ಕೇರಳದ ಗ್ರಾಮಗಳಿಗೆ ತೆರಳಲು ಅನ್ಯ ಮಾರ್ಗಗಳಿಲ್ಲದೆ ಅಕ್ಷರಶಃ ದ್ವೀಪದಂತಹ ಅತಂತ್ರ ಸ್ಥಿತಿಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾ.ಪಂ. ಕಚೇರಿ, ಗ್ರಾಮಾಧಿಕಾರಿಗಳ ಕಚೇರಿ, ಪಡಿತರ ಅಂಗಡಿ, ಕೃಷಿ ಭವನ, ಮೃಗಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ವಿದ್ಯುತ್ ವಿಭಾಗೀಯ ಕಚೇರಿ ಮೊದಲಾದ ತುರ್ತು ಅಗತ್ಯಗಳಿಗೆ ಕೇರಳದ ಭಾಗವಾಗಿರುವ ಪೆರ್ಲಕ್ಕೆ ತೆರಳಬೇಕಾಗುತ್ತದೆ. ಆದರೆ ಮುಂಗಾರು ಆರಂಭಗೊಂಡೊಡನೆ ಹೊಳೆ ತುಂಬಿ ಹರಿಯುವ ಕಾರಣ ಮುಂದಿನ ನವೆಂಬರ್ ವರೆಗೆ ಪೆರ್ಲದತ್ತ ಸಂಚರಿಸಲಾಗದೆ ಜನರು ಕಂಗಾಲಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ವಿದ್ಯುತ್ ಈ ಗ್ರಾಮಗಳಿಗೆ ಕೇರಳದಿಂದಲೇ ಲಭ್ಯವಾಗುವುದು. ಆದರೆ ದುರಸ್ಥಿ ಕಾರ್ಯಗಳಿಗೆ ಲೈನ್ ಮೆನ್ ಗಳಿಗೆ ಬರಲಾಗದ ಸ್ಥಿತಿ ಈಗಲೇ ಎದುರಾಗಿದೆ. ಕರ್ನಾಟಕದಲ್ಲಿ ಹಾಲು ಸಂಗ್ರಹಿಸಿ ಕೇರಳಕ್ಕೆ ಸಾಗಬೇಕಾದರೆ ಸಾರಡ್ಕ ಅಂತರ್ ರಾಜ್ಯ ಚೆಕ್ ಪೋಸ್ಟ್ ನಲ್ಲಿ ಹಾಲು ಇಳಿಸಿ ಕೈಯಿಂದ ಗಡಿದಾಟಿಸಿ ಬಳಿಕ ಅಲ್ಲಿಂದ ಕೇರಳದ ವಾಹನದಲ್ಲಿ ತೆಗೆದುಕೊಂಡು ಸಾಗಬೇಕಾಗಿದೆ. ಅಡುಗೆ ಅನಿಲ ಖಾಲಿಯಾದರೂ ವಾಹನ ಗಡಿ ದಾಟಿ ಬರುವಂತಿಲ್ಲ. ಉಚಿತ ಪಡಿತರ ಸೌಕರ್ಯವನ್ನು ಸರ್ಕಾರ ಘೋಶಿಸಿದ್ದರೂ ಅದನ್ನು ಪಡೆಯಲು ಅಡ್ಕಸ್ಥಳದಲ್ಲಿರುವ ಪಡಿತರ ಅಂಗಡಿಗೆ ತೆರಳಲು ಗಡಿ ಕೋವಿಡ್ ಕಾರಣ ಅಡ್ಡಿಯಾಗಿದೆ. ಈ ಕುಗ್ರಾಮಕ್ಕೆ ಕರ್ನಾಟಕದ ಅಡ್ಯನಡ್ಕ, ವಿಟ್ಲ, ಪೆರುವಾಯಿಗಳು ಅತಿ ನಿಕಟ ಪ್ರದೇಶವಾದರೂ ಆಡಳಿತಾತ್ಮಕವಾಗಿ ಕೇರಳದಲ್ಲಿರುವುದರಿಂದ ಜೀವನಾವಶ್ಯಕ ದಿನಸಿ ಸಾಮಗ್ರಿಗಳನ್ನು ಹೊರತುಪಡಿಸಿ ಮಿಕ್ಕುಳಿದ ವ್ಯವಸ್ಥೆಗಳನ್ನು ಪಡೆಯಲು ಸಮಸ್ಯೆ ಎದುರಾಗುತ್ತಿದೆ.
ಔಷಧಿ ನಿರಾಕರಣೆ-ಸಾವಿನ ದವಡೆಯಲ್ಲಿ ಜನರು!:
ಎಣ್ಮಕಜೆ ಗ್ರಾ.ಪಂ.ನ ಒಂದು ಹಾಗೂ ಎರಡನೇ ವಾರ್ಡ್ ನ ಜನರು ಈವರೆಗೆ ಚಿಕಿತ್ಸಾ ಸೌಕರ್ಯಗಳಿಗೆ ಅಡ್ಯನಡ್ಕ, ವಿಟ್ಲ ಪ್ರದೇಶದ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದರು. ಪ್ರಸ್ತುತ ಲಾಕ್ ಡೌನ್ ಕಾರಣ ಕೇರಳದ ಜನರಿಗೆ ಇಲ್ಲಿ ಚಿಕಿತ್ಸೆ ನಿರಾಕರಿಸಲ್ಪಟ್ಟಿದೆ. ಈ ಕಾರಣದಿಂದ ಅತ್ತ ಕೇರಳಕ್ಕೂ ತೆರಳಲಾಗದೆ, ಕರ್ನಾಟಕದಿಂದ ನಿರಾಕರಿಸಲ್ಪಟ್ಟಿರುವ ಕಾರಣ ಜನರು ಜೀವಭಯದಿಂದ ಸಂಕಷ್ಟಕ್ಕೊಳಗಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಅಸಮರ್ಥ ರಾಜಕಾರಣಿಗಳು!:
ಎಣ್ಮಕಜೆ ಗ್ರಾ.ಪಂ.ನ ಬಾಕಿಲಪದವು ಮತ್ತು ಸಾಯ ಎಂಬೆರಡು ವಾರ್ಡ್ ಗೊಳಪಟ್ಟ ಈ ಕುಗ್ರಾಮಕ್ಕೆ ಈವರೆಗೆ ಯಾವ ರಾಜಕಾರಣಿಗಳೂ ಭೇಟಿ ನೀಡಿಲ್ಲ. ದಶಕಗಳ ಹಿಂದೆ ಒಂದಷ್ಟು ವಾಗ್ದಾನಗಳನ್ನು ನೀಡಿ ಒಂದಿಬ್ಬರು ಜನನಾಯಕರು ಭೇಟಿ ನೀಡಿದ್ದರೂ ಬಳಿಕ ಅವರ ಪತ್ತೆಯೇ ಇಲ್ಲವೆಂಬುದು ಸ್ಥಳೀಯರ ಅಭಿಪ್ರಾಯ. ಕೇರಳದ ಸ್ಟೈಲ್ ನಂತೆ ಇಲ್ಲಿ ಯಾವ ರಾಜಕೀಯ ಪಕ್ಷವೂ ಹೆಚ್ಚು ಕ್ರಿಯಾತ್ಮಕವಾಗಿಲ್ಲದಿರುವುದರಿಂದ ಸಹಜವಾದ ಪೈಪೋಟಿಗಳಿಲ್ಲದೆ 40 ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇಂದಿದೆ.ಆಸ್ಪತ್ರೆ, ಅಂಗನವಾಡಿ, ಪಡಿತರ ಅಂಗಡಿಗಳಾಗಲಿ ಹೆಚ್ಚೇಕೆ ಡಾಂಬರು ಸತ್ಯ ಸೌಕರ್ಯವಾದರೂ ಈ ಗ್ರಾಮಕ್ಕೆ ಇರದಿರುವುದು ಸಬಲ ಕೇರಳದ ಗ್ರಾ.ಪಂ. ನೊಳಗೆ ಎಂಬುದು ವಿಶೇಷ!
ಅಭಿಮತ:
ಸೀರೆ ಹೊಳೆಗೆ ಬಾಕಿಲಪದವು ಪ್ರಹ್ಲಾದಪುರದಲ್ಲಿ ಸೇತುವೆ ನಿರ್ಮಿಸಬೇಕೆಂದು ದಶಕಗಳಿಂದ ಅಧಿಕೃತರಿಗೆ ಮನವಿ ನೀಡುತ್ತಿದ್ದರೂ ಈವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಡ್ಯನಡ್ಕ-ಸಾರಡ್ಕ ಮೂಲಕ ಪೆರ್ಲ ಸಹಿತ ಜಿಲ್ಲಾ ಕೇಂದ್ರ ಕಾಸರಗೋಡಿಗಾಗಲಿ, ತಾಲೂಕು ಕೇಂದ್ರ ಉಪ್ಪಳಕ್ಕಾಗಲಿ ತೆರಳಲು ಸಾಧ್ಯವಾಗದಿರುವುದು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಒಮ್ಮತದ ಕೊರತೆ ಸಮಸ್ಯೆ ಮುಂದುವರಿಯಲು ಕಾರಣ.
ನಾರಾಯಣ ಭಟ್ ಬಾಕಿಲಪದವು.
ಸ್ಥಳೀಯ ನಿವಾಸಿ.