ಕಾಸರಗೋಡು: ವಿದೇಶ ರಾಷ್ಟ್ರದಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರ ಪೈಕಿ ಕೆಲವರನ್ನು ಕ್ವಾರಂಟೈನ್ ಗೆ ಒಳಪಡಿಸದೆ ಅವರವರ ಮನೆಗೆ ತೆರಳಲು ಬಿಟ್ಟಿರುವುದಾಗಿ ಆರೋಪಿಸಲಾಗಿದೆ.
ಶನಿವಾರ ಗಲ್ಪ್ ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ 140 ಪ್ರಯಾಣಿಕರಿದ್ದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ಪೈಕಿ 20ರಷ್ಟು ಮಂದಿ ಯಾವುದೇ ಕ್ವಾರಂಟೈನ್ ಗೊಳಗಾಗದೆ ಅವರವರ ಊರಿಗೆ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ತೆರಳಿರುವುದು ವಿವಾದವಾಗಿದೆ.
ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 140 ಪ್ರಯಾಣಿಕರು ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇವರನ್ನು ಕಾಸರಗೋಡಿನ ಮೂರು ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು ವ್ಯವಸ್ಥೆಗೊಳಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯವರಾದ 20 ಮಂದಿಗಳಿಗೆ ಯಾವ ಹೋಟೆಲ್ ಗೆ ತೆರಳಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ್ದರಿಂದ ಇವರು ಹೇಗೋ ರಾತ್ರಿ ತಲಪ್ಪಾಡಿ ಅಂತರ್ ರಾಜ್ಯ ಗಡಿಗೆ ಬಂದು ತಲಪಿಸಿದರು. ಈ ವೇಳೆ ವಿಷಯ ತಿಳಿದು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಶಾಸಕ ಯು.ಟಿ.ಖಾದರ್ ಅವರು ಇವರನ್ನು ತಲಪ್ಪಾಡಿಯಿಂದ ಮಂಗಳೂರಿನ ಹೋಟೆಲ್ ಗೆ ಕರೆದೊಯ್ದು ವ್ಯವಸ್ಥೆ ಕಲ್ಪಿಸಿದರು ಎಂದು ತಿಳಿದುಬಂದಿದೆ.
ಕಾಸರಗೋಡು ಜಿಲ್ಲಾಡಳಿತದ ನಿರ್ಲಕ್ಷ್ಯ ಇದೀಗ ಭಾರೀ ಪ್ರತಿಭಟನೆಗೆ ಕಾರಣವಾಗುತ್ತಿದ್ದು, ಜಿಲ್ಲಾಧಿಕಾರಿಗಳು ತಮ್ಮ ಹುದ್ದೆಯಲ್ಲಿ ಅಹಂ ಪ್ರದರ್ಶಿಸುತ್ತಿದ್ದಾರೆ. ಕೋವಿಡ್ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿ ಜನರನ್ನು ಭೀತಿಗೊಳಪಡಿಸುವ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆಂದು ಬಹಿರಂಗ ಹೇಳಿಕೆಗಳೂ ಕೇಳಿಬರುತ್ತಿದೆ.