ದೆಹಲಿ: ಅಮೆರಿಕ, ಬ್ರೆಜಿಲ್ ನಂತರ ಸದ್ಯದ ಮಟ್ಟಿಗೆ ವಿಶ್ವದ ಕೊರೊನಾ ಹಾಟ್‍ಸ್ಪಾಟ್ ದೇಶ ಅಂದ್ರೆ ಅದು ಭಾರತ. ದಿನದಿಂದ ದಿನಕ್ಕೆ ಭಾರತದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಒಂದು ಹಂತದಲ್ಲಿ ಟಾಪ್ 10ರೊಳಗೂ ಇಲ್ಲದ ಭಾರತ ಈಗ ಟಾಪ್ ಮೂರಕ್ಕೆ ಪ್ರವೇಶ ಮಾಡಿದೆ. ಇಷ್ಟು ದಿನ ರಷ್ಯಾ ನಂತರ ಭಾರತ ಸ್ಥಾನ ಪಡೆದುಕೊಂಡಿತ್ತು. ಆದ್ರೀಗ, ರಷ್ಯಾ ದೇಶವನ್ನು ಹಿಂದಿಕ್ಕಿರುವ ಭಾರತ, ಕೊರೊನಾ ವೈರಸ್ ವಿಚಾರದಲ್ಲಿ ಮತ್ತಷ್ಟು ಆತಂಕಕ್ಕೆ ಹತ್ತಿರವಾಗಿದೆ.
ಹೊಸ ಪ್ರಕರಣ ಪಟ್ಟಿಯಲ್ಲಿ ಮಾತ್ರ ಸಕ್ರಿಯವಾಗಿರುವ ಕೇಸ್‍ಗಳ ಪಟ್ಟಿಯಲ್ಲೂ ಭಾರತ ಟಾಪ್ ನಾಲ್ಕರೊಳಗೆ ಗುರುತಿಸಿಕೊಂಡಿದೆ. ಈ ಅಂಕಿ ಅಂಶಗಳನ್ನು ಗಮನಿಸುತ್ತಿದ್ದರೆ, ದಿನೇ ದಿನೇ ಭಾರತ ಅಪಾಯಕ್ಕೆ ಸನಿಹವಾಗುತ್ತಿದೆ ಎಂಬ ಭಯ ಮೂಡುತ್ತಿದೆ.
ಭಾರತದಲ್ಲಿ 8,909 ಹೊಸ ಕೇಸ್ ದಾಖಲು:
ಜೂನ್ 3ರ ಬೆಳಿಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ನಿನ್ನೆ ಒಂದೇ ದಿನ 8,909 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದಿನವೊಂದರಲ್ಲಿ ದಾಖಲಾದ ಗರಿಷ್ಠ ಸೋಂಕಿತರ ಸಂಖ್ಯೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್ ದೇಶ ಬಿಟ್ಟರೇ ಭಾರತದಲ್ಲಿ ಅತಿ ಹೆಚ್ಚು ಹೊಸ ಕೇಸ್ ಪತ್ತೆಯಾಗಿದೆ. ಇದು ಸಹಜವಾಗಿ ಭಾರತಕ್ಕೆ ಆಂತಕಕಾರಿ ವಿಷಯವಾಗಿದೆ.
ರಷ್ಯಾ ಹಿಂದಿಕ್ಕಿದ ಭಾರತ:
ಇಷ್ಟು ದಿನ ಅಮೆರಿಕ, ಬ್ರೆಜಿಲ್ ನಂತರ ರಷ್ಯಾದಲ್ಲಿ ಅತಿ ಹೆಚ್ಚು ಹೊಸ ಕೇಸ್ ದಾಖಲಾಗುತ್ತಿತ್ತು. ಈಗ ರಷ್ಯಾ ದೇಶವನ್ನು ಹಿಂದಿಕ್ಕಿರುವ ಭಾರತ ಒಂದು ಸ್ಥಾನ ಮೇಲಕ್ಕೇರಿದೆ. ನಿನ್ನೆ ರಷ್ಯಾದಲ್ಲಿ 8,863 ಜನರಿಗೆ ಸೋಂಕು ದೃಢವಾಗಿತ್ತು. ಭಾರತದಲ್ಲಿ 8,909 ಜನರಿಗೆ ವೈರಸ್ ತಗುಲಿತ್ತು. ಅಮೆರಿಕದಲ್ಲಿ ನಿನ್ನೆ 21,882 ಕೇಸ್ ವರದಿಯಾಗಿದ್ದರೆ, ಬ್ರೆಜಿಲ್‍ನಲ್ಲಿ 27,263 ಜನರಿಗೆ ಸೋಂಕು ಅಂಟಿಕೊಂಡಿದೆ.
ಆಕ್ಟಿವ್ ಕೇಸ್‍ಗಳ ಪಟ್ಟಿಯಲ್ಲೂ ಭಾರತ ಟಾಪ್:
ಪ್ರಸ್ತುತ ಅಮೆರಿಕದಲ್ಲಿ ಹೆಚ್ಚು ಕೊರೊನಾ ಕೇಸ್‍ಗಳು ಸಕ್ರಿಯವಾಗಿದೆ. 1,881,205 ಲಕ್ಷ ಜನರಿಗೆ ಸೋಂಕು ತಗುಲಿತ್ತು. ಅದರಲ್ಲಿ 645,974 ಗುಣಮುಖರಾಗಿದ್ದಾರೆ. ಇನ್ನು 1,127,172 ಪ್ರಕರಣಗಳು ಆಕ್ಟಿವ್ ಆಗಿದೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಹಾಗು ಮೂರನೇ ಸ್ಥಾನದಲ್ಲಿ ರಷ್ಯಾ ಸ್ಥಾನ ಪಡೆದಿದ್ದು, 100,285 ಆಕ್ಟಿವ್ ಕೇಸ್ ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಯುಕೆ, ಇಟಲಿ, ಸ್ಪೇನ್ ಹಿಂದಿಕ್ಕಲಿದೆಯಾ ಇಂಡಿಯಾ?:
ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಸ್ತುತ ಭಾರತ ಏಳನೇ ಸ್ಥಾನದಲ್ಲಿದೆ. ಬಹುಶಃ ಹೊಸ ಕೇಸ್‍ಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಯುಕೆ (277,985), ಇಟಲಿ (233,515), ಸ್ಪೇನ್ (287,012) ದೇಶಗಳನ್ನು ಹಿಂದಿಕ್ಕಿ ಭಾರತ (207,615) ಮುಂದೆ ಬರಲಿದೆ ಎಂಬ ಆತಂಕ ಕಾಡುತ್ತಿದೆ.