ಪೆರ್ಲ: ಎಣ್ಮಕಜೆ ಪಂಚಾಯತಿಯ ಒಂದನೇ ವಾರ್ಡ್ ಸಾಯ ಹಾಗೂ ಎರಡನೇ ವಾರ್ಡ್ ಚವರ್ಕಾಡು ಪ್ರದೇಶದ ನಿವಾಸಿಗಳು ಅನುಭವಿಸುತ್ತಿರುವ ಸಂಚಾರ ಸಮಸ್ಯೆ, ವೈದ್ಯಕೀಯ ಸಮಸ್ಯೆ, ಪಡಿತರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡದೆ ಎರಡೂ ವಾರ್ಡಿನ ನಿವಾಸಿಗಳ ಯಾವುದೇ ಕೂಗಿಗೆ ಕಿವಿ ಕೊಡದೆ ಜನರ ಮೂಲಭೂತ ಹಕ್ಕುಗಳನ್ನು ಧಮನ ಮಾಡುವ ಮೂಲಕ ಎರಡೂ ವಾರ್ಡ್‍ಗಳ ಮೇಲೆ ಮಲತಾಯಿ ಧೋರಣೆಯನ್ನು ತೋರಿಸುತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತಿ, ಕಾಸರಗೋಡು ಜಿಲ್ಲಾಡಳಿತ, ಹಾಗೂ ಕೇರಳ ಸರ್ಕಾರದ ವಿರುದ್ಧ, ಎರಡೂ ವಾರ್ಡಿನ ನಿವಾಸಿಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸಿ, ಎಣ್ಮಕಜೆ ಪಂಚಾಯತಿ ಬಿಜೆಪಿ ವತಿಯಿಂದ ಸೋಮವಾರದಿಂದ ಅನಿರ್ಧಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಪೆರ್ಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಬೆಳಿಗ್ಗೆ 10 ಕ್ಕೆ ಸಾರಡ್ಕ ದಲ್ಲಿ ಕಾರ್ಯಕ್ರಮವನ್ನು ಬಿಜೆಪಿ ನೇತಾರ, ಬಿಜೆಪಿ ಕಣ್ಣೂರು ವಲಯದ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉಧ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಭಟ್, ಮಂಡಲಾಧ್ಯಕ್ಷ ಮಣಿಕಂಠ ರೈ, ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಮಂಡಲ ಕಾರ್ಯದರ್ಶಿ ಸುರೇಶ್ ವಾಣಿನಗರ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತ ಬಾಳಿಕೆ, ಪಂಚಾಯತಿ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ, ಜನಪ್ರತಿನಿಧಿಗಳಾದ ಸತೀಶ್ ಕುಲಾಲ್, ಮಮತಾ ರೈ, ಮಲ್ಲಿಕಾ ರೈ, ಪುಟ್ಟಪ್ಪ ಖಂಡಿಗೆ ನೇತಾರರಾದ ಅಜಯ್ ಪೈ, ಚರಣ್ ದೀಪಕ್ (ಹೇಮು), ಪವಿತ್ರ, ಅಶೋಕ್, ಮೊದಲಾದವರು ಉಪಸ್ಥಿತರಿದ್ದರು.ಬಳಿಕ ಸಾರಡ್ಕ ದಿಂದ ಪೆರ್ಲದ ವರೆಗೆ ಪಾದಯಾತ್ರೆ ಯಲ್ಲಿ ಬಂದು ಪೆರ್ಲ ಪೇಟೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಗಡಿ ಗ್ರಾಮಗಳಾದ ಸಾಯ-ಚವರ್ಕಾಡು, ಬಾಕಿಲಪದವು ಪ್ರದೇಶಗಳ ಅತಂತ್ರತೆಯ ಬಗ್ಗೆ ಮೇ.30 ರಂದು ಸಮರಸ ಸುದ್ದಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಳ್ಳುತ್ತಿರುವಂತೆ ರಾಜಕೀಯ ಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ಸ್ ಪಕ್ಷದ ನೇತಾರರು ಗಡಿಗಳಲ್ಲಿ ಭೇಟಿ ನೀಡಿ ಗಡಿ ಗ್ರಾಮಗಳ ಜನರ ಸಂಚಾರಕ್ಕೆ ಅನುವು ಮಾಡುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿಯದಿರುವುದು ದುರ್ದೈವವೆಂದೇ ಹೇಳಲಾಗಿದೆ.