ಕಾಸರಗೋಡು: ವಿದೇಶಗಳಿಂದ, ಇತರ ರಾಜ್ಯಗಳಿಂದ ಆಗಮಿಸಿದ ಮಂದಿಗೆ ಜಿಲ್ಲೆಯಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸದೇ ವಸತಿ ಹೂಡಲು ವ್ಯವಸ್ಥೆ ಯಾರಾದರೂ ನಡೆಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕೋವಿಡ್ ಕಟ್ಟುನಿಟ್ಟುಗಳ ಪ್ರಕಾರ ವಿದೇಶಗಳಿಂದ ಆಗಮಿಸುವವರಿಗೆ ವಿಮಾನನಿಲ್ದಾಣಗಳಿಂದ, ಇತರ ರಾಜ್ಯಗಳಿಂದ ಆಗಮಿಸುವವರಿಗೆ ರೈಲು ನಿಲ್ದಾಣ ಸಹಿತ ಕೇಂದ್ರಗಳಿಂದ ನೇರವಾಗಿ ರೂಂ ಕ್ವಾರೆಂಟೈನ್ ಯಾ ಸರಕಾರಿ ಸ್ವಾಮ್ಯದ ನಿಗಾದಲ್ಲಿ ವಸತಿ ಹೂಡುವಂತೆ ತಿಳಿಸಲಾಗುತ್ತದೆ. ಆದರೆ ಜೂ.27ರಂದು ಕಣ್ಣೂರು ವಿಮಾನನಿಲ್ದಾಣದಿಂದ ಮಂಗಳೂರಿಗೆ ತೆರಳಬೇಕಾದ ಕೆಲವರು ಜಿಲ್ಲಾಡಳಿತದ ಅನುಮತಿ ಪಡೆಯದೆಯೇ ನಗರದ ಮೂರು ವಸತಿಗೃಹಗಳಲ್ಲಿ ತಂಗಿದುದು ಸಮಸ್ಯೆಯಾಗಿದೆ. ಈ ಸಂಬಂಧ ಪೆÇಲೀಸರಿಗೆ, ಆರೋಗ್ಯ ಇಲಾಖೆಗೆ, ಕಂದಾಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಈ ಕಾರಣದಿಂದ ವಸತಿಗೃಹಗಳ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಇದೇ ವೇಳೆ ತಹಸೀಲ್ದಾರರ ಅನುಮತಿ ಪಡೆದು ಈ ಮಂದಿಯನ್ನು ವಸತಿಗೃಹಗಳಲ್ಲಿ ತಂಗುವಂತೆ ಮಾಡಲಾಗಿದೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಈ ಸಂಬಂಧ ನಡೆಸಿದ ತನಿಖೆಯಲ್ಲಿ ತಹಸೀಲ್ದಾರ ಅನುಮತಿ ನೀಡಿಲ್ಲ ಎಂಬುದು ಖಚಿತವಾಗಿದೆ. ಇಂಥಾ ಅಪಪ್ರಚಾರಗಳನ್ನು ಜನ ನಂಬಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ಕಾರದ ಆದೇಶ ಪ್ರಕಾರ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸದೇ, ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯದೇ ವಿದೇಶದಿಂದ, ಇತರ ರಾಜ್ಯಗಳಿಂದ ಆಗಮಿಸಿದ ಮಂದಿಯನ್ನು ವಸತಿಗೃಹಗಳಲ್ಲಿ ವಸತಿ ಹೂಡುವಂತೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಾರ್ವಜನಿಕರು ಕೋವಿಡ್ ಸೋಂಕು ಹರಡುವಿಕೆ ಪ್ರತಿರೋಧ ಚಟುವಟಿಕೆಗೆ ಬೆಂಬಲ ನೀಡುವಂತೆ ಜಿಲ್ಲಾಧಿಕಾರಿ ವಿನಂತಿಸಿದರು.